Wednesday, October 30, 2024

ನಿರಂತರತೆ ಹಾಗೂ ನಮ್ಮೊಳಗಿರುವ ಶೈತಾನ

 ಮೊನ್ನೆಯಷ್ಟೆ ಯಾವುದೋ ಕಾರ್ಯದ ನಿಮಿತ್ತ ನನ್ನ ಹುಟ್ಟೂರಿಗೆ ಹೋಗಿದ್ದಾಗ ಕಾಲೇಜು ದಿನಗಳ ಗೆಳೆಯನೊಬ್ಬ ಆಕಸ್ಮಿಕವಾಗಿ ಸಿಕ್ಕ. ನನ್ನನ್ನ ಟಬ್ಬಾ, ಡುಮ್ಮಿ, ಮಾಮಾ ಎಂದು ಸಂಬೋಧಿಸಿಯೇ ನನ್ನ ಗೆಳೆಯರಿಗೆ ರೂಡಿ. ನನ್ನ ಆಕಾರ ಹಾಗೂ ಆವೃತ್ತಿಯೇ ಹಾಗೆ. ಇಷ್ಟ ಪಟ್ಟು ಬೆಳೆಸಿದ ದೇಹವನ್ನ ಕಷ್ಟ ಪಟ್ಟು ಕರಿಗಿಸಲಾದೀತೇ?

"ಟಬ್ಬಾ, ಹೆಂಗದಿ. ಎಷ್ಟು ವರ್ಷಾ ಆತು ನಿನ್ನಾ ನೋಡಿ, ಆವಾಗ ಹೆಂಗ್ ಇದ್ದ್ಯೋ, ಈಗೂ ಹಂಗ ಅದಿ ಅಲ್ಲಲೇ. ಒಂಚೂರೂ ಕಮ್ಮಿ ಆಗೇಲ ನೋಡ್ ನೀ. ಅವಾಗು ಇವಾಗೂ ಡುಮ್ಮಾನೇ."

ನನ್ನ ಕಪ್ಪು ಮುಖ ಅರೆ ಕ್ಷಣ ಕೆಂಪೇರಿದ್ದು ನಿಜಾ, ಇವನು ಒಂದು ದಿನವಾದರೂ ನಮ್ಮ ಮನೆಗೆ ದಿನಸಿ ಹಾಕಿದ್ದಾನೆಯೇ, ಹೋಗಲಿ ಒಂದು ಹೊತ್ತಿನ ಊಟ ಉಣಬಡಿಸಿದ್ದಾನ ? ಇವನಾರು ನನ್ನ ವಿಕಾರದ ಬಗ್ಗೆ ಇಷ್ಟು ಕಠೋರ ಸತ್ಯಗಳನ್ನ ಹೀಗೆ ಎಲ್ಲರ ಮುಂದೆ ನನಗೆ ಮುಜುಗುರವಾಗುವಂತೆ ಹೇಳುವುದಕ್ಕೆ. ಇವನ ಪರಿಚಯವಾದರೂ ಏನು?

ನನ್ನ ಕಣ್ಣ ಹುಬ್ಬಿನಲ್ಲಿ ಮೂಡಿದ ಪ್ರಶ್ನಾರ್ಥಕ ಚಿಹ್ನೆ ಗಮನಿಸಿದ ಆತ, "ಟಬ್ಬ, ನಾನಲೇ ಸಂಜು, ಸಂಜಯ್".

ನನಗೆ ಒಂದು ಕ್ಷಣ ಹಿಡಿಯಿತು ಮೆದುಳಿನ ಯಾವುದೋ ಮೂಲೆಯಲ್ಲಿ ಧೂಳಿಟ್ಟಿದ ಆ ನೆನಪನ್ನ ಹುಡುಕಿ ತೆಗೆಯಲು. "ಜಿಮ್ಮಿ ಸಂಜು ನಾ, ಏನೋ ಇಷ್ಟೊಂದು ಬದಲಾಗಿದ್ದಿಯ, ಜಿಮ್ ನಿಲ್ಲಿಸಿಬಿಟ್ಟೆಯ"

"ಜಿಮ್ ನಿಲ್ಲಿಸಿ ಯಾವ ಜಮಾನಾ ಆಯ್ತು ಟಬ್ಬ, ಈಗ ಅದೇ ಗೆಳೆಯರು bar ಅಲ್ಲಿ ಸೇರ್ತೀವಿ. ಒಂದು ವ್ಯಯಸ್ಸಾದ ಮೇಲೆ gym ಎಲ್ಲಾ ಯಾಕೆ, beer brandy ನೇ ಓಕೆ ಅನ್ಸುತ್ತೆ ಕಣೋ. ಈ ಸಂಜೆ ಫ್ರೀ ಇದ್ರೆ ರಾಜಭವನ bar and restaurant ಗೆ ಬಾ,  ನಾವಲ್ಲಿ ಖಾಯಂ ಗಿರಾಕಿಗಳು ಕಳೆದ 10 ವರ್ಷದಿಂದ. ಸಿಗುವಾ." ಎಂದು ಹೇಳಿ ಹೊರಟು ಹೋದ, ನನ್ನ ಮನಸ್ಸಿನಲ್ಲಿ ಸಣ್ಣದೊಂದು ಖಾಲಿಜಾಗ ಬಿಟ್ಟು.

ಸಂಜಯ, ಎಂಥಾ ಸ್ಪುರದ್ರೂಪಿಯಾಗಿದ್ದ ಗೊತ್ತೇ?! ಉದ್ದನೆಯ ಮೂಗು, ಅಗಲವಾದ ಹೆಗಲು, ಎದೆಯಷ್ಟೇ ಹೊಟ್ಟೆ, ಮೂಲಂಗಿ ಕಾಲುಗಳು. Personality ದೇವರು ತೂಗಿ ಹಾಕಿ ಹೊಲೆದು ಕಳಸಿದ್ದಾನೇನೋ ಎಂಬಷ್ಟು. ಸಂಜಯನಿಗೆ "ಜಿಮ್ ಸಂಜು" ಅಂತಲೇ ಅಡ್ಡ ಹೆಸರು. ಸಂಜೆ 6 ಘಂಟೆಗೆ ಸರಿಯಾಗಿ ಸಂಜಯನನ್ನು ನಾವು ಬೇರೆಲ್ಲೂ ಹುಡುಕುವ ಅಗತ್ಯವೇ ಇರಲಿಲ್ಲ. ಅಷ್ಟು ಶಿಸ್ತಾಗಿ ಜಿಮ್ ಅಲ್ಲಿ ತಾಲೀಮು ಮಾಡಿ ಅವನ ಆಹಾರ ತಜ್ಞರು ಸೂಚಿಸಿದಂತೆ ಆಹಾರ ಸೇವಿಸಿ ರಾತ್ರಿ10 ಗಂಟೆಯೊಳಗೆ ಮಲಾಗಿದರಾಯಿತು. 

ಅಂಥ ಸಂಜಯ ಈಗ gym ಕಡೆ ಹೊಳ್ಳಿಯೂ ಕೂಡ ನೋಡುತ್ತಿಲ್ಲ, ಅವನ ಆಹಾರಪದ್ದತಿ ಅದೋಗತಿಗೆ ಇಳಿದಾಗಿದೆ. Bar, beer ಅವನನ್ನು ವ್ಯಸನಿಯನ್ನಾಗಿ ಮಾಡಿ ಬಿಟ್ಟಿವೆ. 

ಸಹವಾಸ ದೋಷ, ಮಾಗುತ್ತಿರುವ ವಯಸ್ಸು, ಇರುವುದೊಂದೇ ಜೀವನ- ಎಲ್ಲವನ್ನೂ ರುಚಿಸಿ ರಂಜಿಸಿ ಸವಿದರಾಯಿತು. ನೀವೇನೇ ಸಬೂಬು ಕೊಟ್ಟು ಸಮಾಜಾಯಿಸಬಹುದು. ಆದರೆ ನೀವು ಗಮನಿಸಲೇಬೇಕಾದ ವಿಷಯವೆಂದರೆ ನಿಮ್ಮೊಳಗಿರುವ ಶೈತಾನ ಇವೆಲ್ಲವನ್ನೂ ನಿಮ್ಮ ಜೀವನದಲ್ಲಿ ನಿಮ್ಮ ಕಣ್ಣಂಚಿಗೂ ಸುಳಯದಂತೆ ತಂದು ಕೂರಿಸಿ ಬಿಟ್ಟಿರುತ್ತಾನೆ.

ದಿನನಿತ್ಯವೂ ನಸುಕಿನ ಮುಂಜಾನೆಯಲ್ಲಿ ಎದ್ದು ವಾಯುವಿಹಾರಕ್ಕೆ ಹೋಗುವ ನಿಮಗೆ, "ದಿನಾಲೂ ಹೊಕ್ಕಿ, ಚಳಿ ಬಾಳ ಅದ, ಇವತ್ತೊಂದು ದಿನ ಮಕ್ಕೊಂಡ್ರ ಲೂಕ್ಷಾನು ಏನೂ ಇಲ್ಲಾ". 

ದಿನವೂ ಮೂರೇ ಮೂರು ಇಡ್ಲಿ ತಿನ್ನುವ ನಿಮಗೆ " ಚಟ್ನಿ ತುಂಬಾ ಚೆನ್ನಾಗಿದೆ, ಇಡ್ಲಿ ಮಲ್ಲಿಗೆಗಿಂತ ಹಗುರ. ಇನ್ನೊಂದೆರಡು ಇಡ್ಲಿ ತಿಂದ್ರೆ ತೂಕ ಏನೂ ಹೆಚ್ಚಾಗಲ್ಲ."

ಕೆಲವು ಹಲವಾರು ಹೊತ್ತಿಗೆಗಳನ್ನು ಓದಿದ ನಂತರ "ನೀನೆಷ್ಟು ಬುದ್ಧಿವಂತ ಮಾರಾಯ, ಎಷ್ಟು ಪುಸ್ತಕಗಳನ್ನ ಅರೆದು ಕುಡಿದು ಬಿಟ್ಟಿದ್ದಿಯ, ನಿನ್ನ ಹಾಗೆ ಎಷ್ಟು ಜನರಿದ್ದಾರೆ ಹೇಳು ನೋಡುವಾ".

"ಅರೆರೆ, ಒಬ್ಬ ಹುಡುಗಿಯಾಗಿ ಇಷ್ಟೊಂದು ಸೇವೆಯಾ, ಎಷ್ಟೊಂದು ಹುಡುಗರಿಗೆ ಎಷ್ಟು ಸ್ಕೂಲ್ ಕಿಟ್ ಗಳು, ಎಷ್ಟು ಹೊದಿಕೆಗಳು ದಾನ ಮಾಡಿದ್ದೀಯಾ ನಿರಾಶ್ರಿತರಿಗೆ."

"ಎರೆಡು ತಿಂಗಳು ಸಿಗರೇಟ್ ಕಡೆ ಹೊಳ್ಳಿಯು ನೋಡಿಲ್ಲ, ಮನಸ್ಸಿನ ಮೇಲೆ ಎಷ್ಟು ನಿಯಂತ್ರಣ, ತುಂಬಾ ಹೆಮ್ಮೆ ಪಡುವ ವಿಷಯ. ಮಳೆ ಬಿದ್ದಿದೆ, ಒಂದು ಬತ್ತಿ ಹೊಡೆದರೆ ಏನಾದೀತು, ನೀನು ಬೇಡಾ ಅಂದಾಗ ನಿಲ್ಲಿಸಿದರಾಯಿತು".

"ಅರೇರೇರೇ, ಎಲ್ಲಾ ದಾಂಡಿಗರು ನೆಲಕ್ಕೆ ಬಿದ್ದು ಮೀಸೆ ಮಣ್ಣಾಗುತ್ತಿದ್ದರೂ ನೀನೊಬ್ಬನೇ ಅವಡುಗಚ್ಚಿ ನಿಂತು ನಿನ್ನ ತಂಡವನ್ನು ಗೆಲ್ಲಿಸಿದೆ, ಭಲೇ, ಶಭಾಷ್. ನಿನ್ನ ಸರಿಸಾಟಿ ಯಾರಿನ್ನು. ನಿನಗೇಕೆ ಬೇಕಿನ್ನು ತಾಲೀಮು, ಮೀನಿಗೆ ಈಜು ಹೇಳಿ ಕೊಡಬೇಕೇ "

"ಲೋಕವೇ ಅರ್ಧ ರಾತ್ರಿಯ ನಿದ್ದೆಯನ್ನು ಆನಂದಿಸುವಾಗ ನೀನು ಮಾತ್ರ ಕಣ್ಣು ರೆಪ್ಪೆಗೆ ಖಡಕ್ಕಾಗಿ ಎಚ್ಚರಿಕೆಯನ್ನಿತ್ತು ಗಣಕ ಯಂತ್ರದ ಮುಂದೆ ಕೂತು ಕೆಲಸ ಮಾಡುತ್ತಿರುವೆಯಲ್ಲಾ, ಏನು ಹೇಳಿ ಹಾಡಿ ಹೊಗಳಲಿ . ಇನ್ನು ನಾಲ್ಕು ತಿಂಗಳು ಕೆಲಸ ಮಾಡಿದ್ದರೂ ಆಯಿತು, ಅಷ್ಟೂ ನೀನು ಇದೊಂದೇ ವಾರದಲ್ಲಿ ಮುಗಿಸಿದ್ದಿಯ"

 ಹೀಗೆಯೇ ನಿಮ್ಮ ಕಿವಿಯಲ್ಲಿ ಪಿಸುಗುಟ್ಟಿ ನಿಮ್ಮ ನಿರಂತರತೆಯ ಹಾದಿ ತಪ್ಪಿಸುವ ಆತ ನಿಮ್ಮೊಳಗೇ ಇದ್ದಾನೆ, ಹುಷಾರು.


ಶ್ರೀಅಪ್ಪಿ  

Saturday, October 26, 2024

Sorry, I'm not sorry

 ಇತ್ತೀಚಿಗೆ ನಮ್ಮ ಎರೆಡು ವರ್ಷದ ವಸತಿ ಸಮುಚ್ಚಯದಲ್ಲಿ, ಹಿಂದೆಂದೂ ನಡೆಯದ ಘಟನೆ ಕೆಲವರನ್ನು ಘಾಸಿಗೊಳಿಸಿತ್ತು. ಅಂದಾಜು ಸಾವಿರ ಮನೆಗಳು ಇರುವ ಒಂದು ಪುಟ್ಟ ಹಳ್ಳಿಯೇ ಸರಿ. ಹತ್ತು ಎಕರೆಯ ಜಾಗದಲ್ಲಿ ಸಾವಿರ ಮನೆಗಳು ಹಾಗು ಸಾಲು ಸಾಲು ಕಾರುಗಳು(ಸಾಲದ ಕಾರುಗಳು). ಎಲ್ಲರಿಗೂ ಎಲ್ಲರ ಮುಖ ಪರಿಚಯವಿದೆ, ಬೆರಳಿಕೆಯಷ್ಟು ಜನ ತಮ್ಮದೇ ಆದ ರೀತಿಯಲ್ಲಿ ಹೆಸರುವಾಸಿ. (ನೆನಪಿರಲಿ, ಕನ್ನಡಿಗರಿಗೆ Dr ರಾಜಕುಮಾರ ಅವರೂ ಗೊತ್ತು, ವೀರಪ್ಪನ್ ಕೂಡಾ.)

ಯಾವುದೋ ಒಂದು ವಿಷಗಳಿಗೆಯಲ್ಲಿ, ಒಬ್ಬ ಮಹಾಷಯ, ಇನ್ನೊಬ್ಬನಿಗೆ  ಬೆರಳು ಸನ್ನೆ ಮಾಡಿ ಅವಾಚ್ಯ ಶಬ್ದಗಳ ಬಳಿಕೆಯಿಂದ ಅವಮಾನಿಸಿದ್ದು ನಮಗೆ ಜೀರ್ಣಿಸದೆ ನಮ್ಮ ಹಳ್ಳಿಯ ಚುನಾಯಿತ ಪಂಚಾಯತಿ ಪ್ರತಿನಿಧಿಗಳ ಬಳಿಗೆ ವಿಷಯ ತಲುಪಿಸಿದೆವು. ಉತ್ತರವಾಗಿ, ತಪ್ಪುಕೋರಿಕೆ ಪತ್ರ ಸಲ್ಲಿಸುವುದಾಗಿ ತೀರ್ಮಾನವಾಯಿತು. ವಿಷಯ ಇಷ್ಟೇ ಆಗಿದ್ದರೆ ಈ ಅಂಕಣ ಬರೆಯುವ ಜರೂರತ್ತು ನನಗೇನಿತ್ತು. ಆಗ ನನಗೆ ಹಾಗು ಕೆಲವು ಸಮಾನ ವಕ್ರ ಮನಸ್ಸಿನವರಿಗೆ ತೋಚಿದ್ದು, "ಸರಿ, ಇನ್ನು ಮುಂದೆ ಈ ನಾಗರಿಕ ಸಮುಚ್ಚಯದಲ್ಲಿ ಯಾರು ಯಾರಿಗೆ ಬೇಕಾದರೂ, ಯಾವಾಗಲಾದರೂ ಹೇಗೆ ಬೇಕೋ ಹಾಗೆ ವ್ಯವಹರಿಸಬಹುದು, ಅದು ಇನ್ನೊಬ್ಬರಿಗೆ ನೋವಾಗಿದ್ದರೆ ಮಾತ್ರ ಒಂದು ತಪ್ಪು ಕೋರಿಕೆ ಪತ್ರ ಕೊಟ್ಟರಾಯಿತು, ಅಷ್ಟೇ. ಅಲ್ಲವೇ ?".

ಈ ಘಟನೆ ಮತ್ತು ಅದಕ್ಕೆ ನಮ್ಮ ಚುನಾಯಿತ ಪ್ರತಿನಿಧಿಗಳ ತೀರ್ಮಾನ ನನಗೆ, Dr H. ನರಸಿಂಹಯ್ಯ, ಮಾಜಿ ಪ್ರಾಂಶುಪಾಲರು, National College, ಬಸವನಗುಡಿ, ಬೆಂಗಳೂರು ಅವರು ಹಂಚಿಕೊಂಡ ಅನುಭವ ನೆನಪಿಸಿತು, ಒಪ್ಪಿಸಿಕೊಳ್ಳಿ.

Dr H ನರಸಿಂಹಯ್ಯನವರು, H.N ಎಂದೇ ಚಿರಪರಿಚಿತ. ಅವರು ವಸತಿ ಶಾಲೆಯೊಂದರಲ್ಲಿ ಮೇಲ್ವಿಚಾರಕರಾಗಿದ್ದ ಕಾಲಘಟ್ಟ. ಶಿಸ್ತಿಗೆ ಇನ್ನೊಂದು ಹೆಸರೇ H.N ಎನ್ನುವಷ್ಟು ವಿದ್ಯಾರ್ಥಿಗಳಲ್ಲಿ, ಸಹೋದ್ಯೋಗಿಗಳಲ್ಲಿ ಛಾಪು ಇದ್ದ ಸಮಯವದು. ತುಂಬ ಅಶಿಸ್ತು ಅಗೌರವಕ್ಕೆ ಪಾತ್ರವಾದ ವಸತಿ ಶಾಲೆಗೆ ಇವರ ವರ್ಗಾವಣೆ ಆಯ್ತು, ಆದೇಶದಲ್ಲಿ H.N ಅವರಿಗೆ ವಿಶೇಷ ವಿನಂತಿ : ಆದಷ್ಟು ಬೇಗ ಆ ಶಾಲೆಯಲ್ಲಿ ಕಟ್ಟುನಿಟ್ಟು ಶಿಸ್ತಿನ ಸ್ಥಾಪನೆ ಆಗಬೇಕು, ಓದುತ್ತಿರುವರಲ್ಲಿ ಹೆಚ್ಚು ಪಾಲು ನಮ್ಮ ರಾಜಕಾರಣಿಗಳ ಮಕ್ಕಳು, ಸಂಭಂದೀಕರ  ಮಕ್ಕಳು ಎಂದು. 

H.N ಅವರು ಕರ್ತವ್ಯಕ್ಕೆ ಹಾಜರಾಗಿ, ಆ ವಸತೀಶಾಲೆಯ ಜವಾಬ್ಧಾರಿಯನ್ನು ಕೈಗೆತ್ತಿಕೊಂಡು ಎರಡು ಮೂರು ದಿನ ಪರಿಶೀಲಿಸಿದರು. ಎಲ್ಲರೂ ಅಶಿಸ್ತಿನ ಮೂಟೆಗಳೇ. 

ಸರಿ, ಕ್ರಮಬದ್ಧತೆಯ ಮೊದಲ  ಭಾಗವಾಗಿ ಬೆಳಿಗ್ಗೆ 6 ಘಂಟೆಗೆ ಎಲ್ಲರೂ ಶಾಲೆಯ ಆವರಣದಲ್ಲಿ ಸಾಲಾಗಿ ನಿಂತು ನಾಡಗೀತೆ " ಜೈ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ" ಹಾಗು ರಾಷ್ಟ್ರಗೀತೆ ಹೇಳಿ ಅವರವರ ಕೋಣೆಗೆ ತೆರಳಿ ಓದಿಕೊಳ್ಳ ತಕ್ಕದ್ದು ಎಂದು ಎಲ್ಲಾ ಕೊಠಡಿಗಳಿಗೆ ಆದೇಶ ಹೊರಡಿಸಲಾಯಿತು.  ಇದಾದ ಒಂದೆರಡು ವಾರದಲ್ಲಿ H.N ಅವರ ಗಮನಕ್ಕೆ ಬಂದದ್ದು 4-5 ವಿದ್ಯಾರ್ಥಿಗಳು ಬೆಳಿಗ್ಗೆ 6 ಘಂಟೆಗೆ ಬರುತ್ತಿಲ್ಲವೆಂದು, ಎಷ್ಟು ಎಚ್ಚರಿಸದರೂ ನಿರ್ಲಕ್ಷಿಸಿದ್ದಾರೆಂದು. 

ಆ ವಿದ್ಯಾರ್ಥಿಗಳನ್ನು H.N ಅವರ ಕೊಠಡಿಗೆ ಕರೆಸಿಕೊಳ್ಳಲಾಯಿತು. ಗುಮಾಸ್ತನಿಂದ ಹಿಡಿದು ಮುಖ್ಯೋಪಾದ್ಯಯರೆಲ್ಲರಿಗೂ ಕುತೂಹಲ, H.N ಅವರು ಈ ದರ್ಪದ ಮದದಾನೆಗಳನ್ನು ಹೇಗೆ ಪಳಗಿಸುತ್ತಾರೆಂದು. ವಿದ್ಯಾರ್ಥಿಗಳ ಮುಖದಲ್ಲಿ ಆತಂಕ, ಇವತ್ತು ಬದುಕುಳಿದರೆ ಸಾಕು ಎನ್ನುವಷ್ಟು ಭೀತಿ. 

H.N ಅವರು ಘಾಂಬಿರ್ಯವಾಗಿ : ಎಷ್ಟು ಎಚ್ಚರಿಕೆ ಕೊಟ್ಟರೂ ನಿಮ್ಮ ತಪ್ಪು ತಿದ್ದಿಕೊಂಡಿಲ್ಲವೆಂದರೆ ನಿಮ್ಮದು ದಪ್ಪ ಚರ್ಮವೇ ಇರಬೇಕು, ಇರಲಿ, ನಿಮ್ಮಂಥವರಿಗೆ ಏನು ಮಾಡಬೇಕೆಂದು ನನಗೆ ಅರಿವಿದೆ. ಗಮನವಿಟ್ಟು ಕೇಳಿ, ಇನ್ನು ಮೇಲೆ ಒಂದುದಿನ ಗೈರು ಹೈಜರಾದರೂ ತಲಾ ೫ ಪೈಸೆ ದಂಡ, ಇದರ ಮೇಲೆ ನಿಮಗೆ ಬಿಟ್ಟಿದ್ದು, ಬೆಳಗಿನ ಪ್ರಾರ್ಥನೆಗೆ ಬರುವಿರೋ ಇಲ್ಲವೋ, ಎಂದು.

ಒಬ್ಬ ಹುಡುಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು ಹೊರಗೆ ನಿಂತ ಗುಮಾಸ್ತನ ತಮಟೆಗೆ ಬೀಳುವಷ್ಟು ಜೋರಾಗಿತ್ತು. ಆತ ತನ್ನ ಎಲ್ಲಾ ಜೇಬುಗಳನ್ನು ತಡಿಕಾಡಿ ಸಿಕ್ಕ ಅಷ್ಟು ಕಾಸನ್ನು ಒಟ್ಟುಗೂಡಿಸಿ, ಲೆಕ್ಕ ಹಾಕಿ, ಹೇಳಿದ್ದು : " ಸಾರ್, ನಾವು ಈ ಊರರಲ್ರಿ. ಬೆಂಗಳೂರು ಚಳಿಗೆ ನಸಿಕ್ನಾಗ ಎದ್ದೇಳಾಕ ಆಗವಲ್ದರಿ. ಅವ್ವಾಗ ಟಪಾಲು ಹಾಕೇವಿ, ಬೆಂಗಳೂರಿಗೆ ಕಳಸೋ ಹಂಗಿದ್ರ ಇನ್ನೂ ಒಂದೆರೆಡು ಖೌದಿ, ಕಂಬಳಿನೂ ಕಳಸವಾ ಅಂತ. ಇದು ಒಂದು ರುಪಾಯಿ ಐತ್ರಿ ಸರ್ರ, ಒಪ್ಪುಸ್ಕೋಬೇಕು. ನಾ ಇನ್ನೂ ೨೦ ದಿನಾ ಮುಂಜ್ ಮುಂಜಾನಿ ಬರಂಗಿಲ್ಲರಿ, ಹೊಟ್ಟಿಗೆ ಹಾಕ್ಕೋರಿ ".

H.N ಅವರು ನಗದೆ ಬೇರೆ ವಿಧಿಯಿರಲಿಲ್ಲ .



--------- ಶ್ರೀಅಪ್ಪಿ ---------------

Thursday, October 24, 2024

ಮರೆಯಾಗುತ್ತಿರುವ ಕ್ರೀಡೆಗಳು ಹಾಗು ಅಡ್ಡ ಪರಿಣಾಮಗಳು

 ನಾವು ಚಿಕ್ಕವರಿದ್ದಾಗ ಏನ್ ಏನ್ ಆಡಿಲ್ಲಾ ಹೇಳಿ. ಕುಂಟಾ ಪಿಲ್ಲೆ, ಮರಕೋತಿ, ಕಣ್ಣಾ ಮುಚ್ಚಾಲೆ, ಚೌಕಾ, ಲಗೋರಿ ಮತ್ತಿನ್ನೇನೋ... ಆಯಾ ವಯಸ್ಸಲ್ಲಿ ಆಯಾ ಆಟಾ ಆಡಿ ನಮ್ಮ ಅಣ್ಣಾ ಅಕ್ಕಾ ಏನ್ ಆಡ್ತಿದ್ದಾರೆ ಅಂಥಾ ಕದ್ದು ಇಣಿಕಿ ನೋಡಿ ನಾವು ಆಟ ಆಡಿ ಏನೂ ಗೊತ್ತಾಗದೆ ಕೈ ಕಾಲು ಗಾಯ ಮಾಡ್ಕೊಂಡಿದ್ದು ಜಾಸ್ತಿ. ಗಾಯಾ ಮಾಡ್ಕೊಂಬಂದಿದಿಯಾ ಅಂಥ ಅಪ್ಪ ಅಮ್ಮನ ವದೆ ತಿಂದಿರೋದು ಇದೆ, ಗಾಯಕ್ಕೆ ಅಳೋದ ಅಪ್ಪ ಅಮ್ಮ ಹೊಡದ್ರಲ್ಲ ಅಂಥಾ ಅಳೋದಾ... 


ಆ ವಯಸ್ಸಿಗೆ ಎಲ್ಲರೂ ಬೇಕಿತ್ತು, ಒಂದು ನಿಮಿಷದಲ್ಲಿ ನಿನ್ ಜೊತೆ ಇನ್ನು ಮಾತಾಡಲ್ಲಲೇ ಅಂಥಾ ಭಯಾನಕವಾಗಿ ಜಗಳ ಮಾಡಿ ಹತ್ತು ನಿಮಿಷಾನು ಆಗಿರಲಿಲ್ಲ, ಇಬ್ಬರು ಹೆಗಲು ಮೇಲೆ ಕೈ ಹಕ್ಕೊಂಡು ಹುಣಿಸೆ ಹಣ್ಣಿನ ಹುಳಿ ಚಿಗುಳಿ ತಿಂದಿದ್ದು ಈಗ ಸಿಹಿ ನೆನಪು.

ಆದರೆ ಇವತ್ತಿನ ಮಕ್ಕಳನ್ನು ನೋಡಿದ್ರೆ ಸ್ವಲ್ಪ ಬೇಸರವಾಗುತ್ತೆ, ಅವರಿಗೆ ಖಾಲಿ ಸಮಯವೇ ಇಲ್ಲ, ಇದ್ದರೂ ಅದು YouTube ಅಲ್ಲೋ ಯಾವದೋ PlayStation ಅಲ್ಲೋ ಕಳೆದು ಹೋಗ್ತಿದೆ. ನಾನು ಅದು ಕೆಟ್ಟದ್ದು, ಒಳ್ಳೇದು ಅಂತ ಹೇಳ್ತಿಲ್ಲ ಆದ್ರೆ ನನ್ನ ಅನಿಸಿಕೆಗಳು, ನನ್ನ ಗಮನಕ್ಕೆ ಬಂದದ್ದು ಹೀಗಿವೆ.


ಕಣ್ಣಾ ಮುಚ್ಚಾಲೆ ಅಲ್ಲಿ ನಾವು ಕಟ್ಟಿಗೆಯ ಕಪಾಟಿನ ಚಿಕ್ಕದೊಂದು ಮೂಲೆಯಲ್ಲಿ ಬಚ್ಚಿಟ್ಟುಕೊಂಡು ಉಸಿರು ಬಿಗಿ ಹಿಡಿದು ನಿಶ್ಯಬ್ದವಾಗಿ ಕೂತಿದ್ದಾಗ ನಮ್ಮ ಮನಸ್ಸಿಗೆ ಇನ್ನೆಂದೂ CASTROPHOBIA ಬರದಂತೆ ಅತೀ ಸಲೀಸಾಗಿ ತಳ್ಳಿ ಹಾಕಿಬಿಟ್ಟಿದ್ದೆವು. 


ಮರಕೋತಿ ಆಡುವಾಗ ಮರವನ್ನ ಹತ್ತಿದ್ದು, ಬಿದ್ದು ಗಾಯ ಮಾಡಿಕೊಂಡು ತದನಂತರ ಮತ್ತೇ ಏನೂ ಆಗೇ ಇಲ್ಲವೇನೋ ಎಂಬಂತೆ ನಮ್ಮ ಕಣ್ಣೀರನ್ನು ನಾವೇ ಒರೆಸಿಕೊಂಡು ಮರವನ್ನಾ ಮರಳಿ ಏರಿದಾಗ hieghtophobia ಯಾವುದೋ ಪರ್ವತಾವನ್ನೇರಿ ಅಲ್ಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ನಮ್ಮ ಗಮನಕ್ಕೆ ಬರಲೇ ಇಲ್ಲ ನೋಡಿ.


ಕಬ್ಬಡ್ಡಿ, ಖೋ ಖೋ ಆಡಿದ್ದಾಗ ನಮ್ಮ ಎರಡನೇ ಹೃದಯವಾದ ಮೀನಖಂಡದ ಮೇಲೆ ಆದ ವ್ಯಾಯಾಮವಂತೂ ಇಂದಿಗೂ ನಮ್ಮ ಕೈ ಹಿಡಿದಿದೆ ಎಂದರೆ ನಂಬುವರಾರು? ಆದರೆ ಆ ಕ್ರೀಡೆಗಳು ಕಲಿಸಿದ ಸಾಂಘಿಕ ಪ್ರಯತ್ನ, ತಂತ್ರಗಾರಿಕೆ ಮತ್ತ್ಯಾವ team building activity ಹೇಳಿಕೊಡಬಲ್ಲದು , ನಮಗಿವ್ಯಾವುದು ಪ್ರಾಮುಖ್ಯವೇ ಆಗಲಿಲ್ಲ, ಗೆದ್ದರೆ ಒಂದು ಹಂಡೆ ಹಾಲು ಸಿಗುತ್ತಿತ್ತು ಇಲ್ಲದಿದ್ದರೆ P.T ಮಾಸ್ತರು ಇನ್ನೆಷ್ಟು ಓಡಿಸಿ ಆಡಿಸುವರೋ ಎಂಬ ದುಗುಡ.

Stress management ಅನ್ನು ಹೇಳಿ ಕೊಟ್ಟ ನಮ್ಮ P.T ಮಾಸ್ತರರಿಗೆ ಸಾಷ್ಟಾಂಗ ನಮಸ್ಕಾರ.

 

ಚೌಕ ಇಂದು ಲಿಡೋ, ಜೂಜು ರೂಪ ತಾಳಿದೆ ಆದರೆ ಅದು ಕಲಿಸಿದ ಗಣಿತ ಅಷ್ಟಿಷ್ಟಲ್ಲ. ಸಂಕಲನ, ಋಣಾಕಾರ, ಮೂರು ಆರರ, ನಾಕು ಎಂಟರ ಮಗ್ಗಿ ಎಷ್ಟು ಸುಲಲಿತವಾಗಿ ನಮ್ಮ ದಿನನಿತ್ಯದ ಸಂಜೆಯ ಒಂದು ಭಾಗವಾಗಿ ಹೋಗಿತ್ತು.


ಇನ್ನು ಲಗೋರಿಗೆ ಬರುವ, ದಿನಕ್ಕೆ ಎಷ್ಟು ಸಲ ನಿಮ್ಮ ಮಕ್ಕಳು ಮಂಡಿಯೂರಿ, ಅರ್ಧ ಬಾಗಿ, ದೃಷ್ಟಿಯನ್ನು ಪೂರ್ತಿ ಕೇಂದ್ರೀಕರಿಸಿ ಗುರಿ ಇಟ್ಟು ಆಡಿದ್ದುಂಟು, ಇನ್ನೊಬ್ಬ ನಿಮ್ಮ ಗೆಳೆಯ ಕಲ್ಲನ್ನು ಜೋಡಿಸುವಾಗ ಎದುರಾಳಿ ಗುಂಪನ್ನು ವಿಕರಿಸಿ, ಲಗೋರಿ ಎಂದು ಗಂಟಲು ಕಿತ್ತು ಹೋಗುವ ಹಾಗೆ ಕಿರಿಚುವಾಗ, Eye Hand moment and alignment ಅಂದರೆ ಗೊತ್ತಾಗುತ್ತಿತ್ತಾ, ಆ ಕ್ಷಣದಲ್ಲಿ ನಮ್ಮ ಗುರಿ ಇದ್ದಿದ್ದು ಒಂದೇ, ಚೆಂಡು ನಮಗೆ ಬೀಳದಂತೆ ಚಡ್ಡಿಯನ್ನು ಬಿಗಿ ಹಿಡಿದುಕೊಂಡು ಒಂದೇ ಸಮನೆ ಓಡುವುದು. ಚೆಂಡು ಸಿಕ್ಕಾಗ ಚೆಂಡು, ಇಲ್ಲವೇ duster ಅದು ಇಲ್ಲವಾ, ಒಂದು ಸಣ್ಣ ಕಲ್ಲನ್ನು ಹಾಳೆಯ ಮುದ್ದೆಯಲ್ಲಿ ಸುತ್ತಿ ಚೆಂಡು ತಯಾರಿಸಿದಾಗ Business Continuity Plan, Emergency handling ಅಂದರೆ ಗೊತ್ತಾಗುತ್ತಿತ್ತಾ. 


ಈ ಅಂಕಣದ ಮುಖ್ಯ ಉದ್ದೇಶ ಮರೆಯಾಗುತ್ತಿರುವ ಕ್ರೀಡಾ ಮನೋಭಾವ. ಸಣ್ಣವರಿದ್ದಾಗ ನಾವು ಎಲ್ಲಾ ಸಣ್ಣಾನೆ ಇದ್ವಿ, ಈಗ ಸ್ವಲ್ಪ ತೂಕ ಜಾಸ್ತಿ ಆಗಿದೆ, ದೇಹಕ್ಕೂ ಹಾಗು .... 😬


ನಿಮ್ಮ ಯಾವ ಆಟ ನಿಮ್ಮನ್ನು ಹೇಗೆ ಪಜೀತಿಗೆ ಸಿಕ್ಕಿಸಿ ಈಗ ನೀವು ಅದನ್ನು ನೆನೆದು ಮನಸಾರೆ ನಕ್ಕು ನಲಿಯುವಿರಿ,

ಕೆಳಗೆ ನಮೂದಿಸಿ 


TBC.....

Monday, May 11, 2020

ಕುಡುಕರು ಸಾರ್ ನಾವು ಕುಡುಕರು

“ಹದಿ ವಯಸ್ಸು ಹಲಕಟ್ ವಯಸ್ಸು”  ಅಂತಾರ್ ನಮ್ಕಡೆ.

ಆ ವಯಸ್ಸು ದಾಟಿ, ತೇವಳಾಡ್ಕೊಂಡು ಕಾಲೇಜ್ ಮುಗುಸಿ ಕೆಲಸಕ್ಕ ಸೇರಿದ್ದು ಒಂದು ದೊಡ್ಡ ನಗೆಪಾಟಲಿ, ಅದರ ಬಗ್ಗೆ ಇನ್ನೊಂದ ಸಲ ಮರ್ಯಾದಿ ತಕ್ಕೊತೆನಿ, ಇವತ್ತು ನಾನು ಹೇಳಾಕ್ಕ್ಹೊಂಟ್ಟಿದ್ದು  ಬ್ಯಾರೆನ ಮಜಾಕಟ್ಟಾ.

ಕೆಲಸಕ್ಕ ಸೇರಿ ಅಧ೯ ವಷ೯ದ ಮೇಲಾಗಿತ್ತು. ಹಂಗೊ ಹಿಂಗೊ ಚುರುಪಾರು ಉಳಸಿದ್ದ ದುಡ್ಡು, ಗೆಳಯರ ದು(ದೂ)ರಾಲೋಚನೆಯುಕ್ತ ಕೈಗಡದ ದೆಸೆಯಿಂದ ನನ್ನ ಮುಕುಳಿ ಕೆಳಗಡೆ ಒಂದು Pulser bike (I named it as The Beast) ಬಂದು ನಿಂತಿತ್ತು.

ಪೂನಾದಾಗ ಹೇಳೋರು ಕೇಳೋರು ಯಾರು ಇರ್ಲಿಲ್ಲ, ವಾರರಾಂತ್ಯಕ್ಕ ಕಾಯ್ಕೋತ ವಾರಾಪೂರ್ತಿ ಹೂಯ್ ಅನ್ನೊಂಗ ಕೆಲ್ಸಾ ಮಾಡೋದು, ಶುಕ್ರವಾರ ರಾತ್ರಿ ಕಂಪನಿ ಗೇಟಿಂದ ಹೊರಾಗ ಬಿತ್ತು ಅಂದ್ರ The Beast ಸೀದಾ ಮನಿಗ್ಹೋಗಿದ್ದು ಇತಿಹಾಸನ ಇಲ್ಲ, ಶಬರಿ Bar and Restaurant ಅದರ ಫಸ್ಟ ಸ್ಟಾಪ್. Waiter ಕನ್ನಡದವರು, ನನ್ನ ಕಂಡ್ರ ತಟಗ ಪ್ರೀತಿ ಜಾಸ್ತಿನ. ಮಂಗಳೂರು ಕಡೆಯವರಾದ್ರು ಉತ್ತರ ಕರ್ನಾಟಕದ ಕನ್ನಡ ಅವರಿಗೆ ಬಲೂಮೋಜು. “ಓಯ್ ಶ್ರೀ, ಇವತ್ತೆಂತ, ಕಂಭ (full bottle) ಹತ್ಲಿಕ್ಕುಂಟಾ” ಅಂತ ಕೇಳೋರು, ಅದಕ್ಕ ನಾನು “ಹತ್ತದೆನ್ ದೊಡ್ಡ ವಿಚಾರನ ಅಲ್ಲ್ ತಗಿರಿ, ಆದ್ರ ಇವತ್ತು ಕುಂಡಿ (financial) ಗಟ್ಟಿ ಇಲ್ರಿ” ಅಂತಿದ್ದೆ, ಇಬ್ಬ್ರು ಜೋರಾಗಿ ನಗ್ತಿದ್ದ್ವಿ, ಆ ವಾರದ ಮಾತುಕತೆ ಅಲ್ಲಿಗೇ ಮುಗಿತು, ಎಣ್ಣೆ ತಂದು, ಸೈಡ್ ಡಿಶ್, ಡಬರಿ ಗಟ್ಟ್ಲೆ ಹುರಿದಿರೊ ಶೇಂಗಾ, ಕೋಳಿದೊಂದು ಬಿರ್ಯಾನಿ, ಕೊನೆಗೊಂದು ಬಟ್ಟಲು ಬೀಸಿ ನೀರು ಜೋತೆ bill ತಂದಿಟ್ಟ್ರೂ, ಅವರೂ ತುಟಕ್ ಅಂತಿರ್ಲಿಲ್ಲ, ನಾನೂ ಪಿಟಿಕ್ ಅಂತಿರ್ಲಿಲ್ಲ.

ಆವತ್ತು bill ಕಟ್ಟಿ ಮನಿಗ ಹೋಗಬೇಕಾಗಿದ್ದ ಗಾಡಿ ಸಣ್ಣಕ ನೆವಾ ತಗದಿತ್ತು, “ಮಾಮ, ಇಲ್ಲೇ ಒಂದ್ ರೌಂಡ್ ಹೋಗಿಬರೊಣು, ಭಾಳ್ ದಿನ ಆತ್ಲೆ, ಪ್ಲೀಸ್” ಅಂತು. ಆವಾಗಿನ ಕಾಲಕ್ಕ ನನಗ ಅದ ಪ್ರಾಣಸಖಿ, ಅಕಿಗೆ ಇಲ್ಲ ಅನ್ನ್ಲಿಕ್ಕೆ ಮನಸಾಗಲಿಲ್ಲ, “ನಾ ಕುಡದೇನ್ ಲೇ, ಎನರ ಹೆಚ್ಚು ಕಮ್ಮಿ ಆದ್ರ ನಿನ್ ಹಣಿಮ್ಯಾಲ ನೋಡು ಎಲ್ಲಾ”  ಅಂದೆ. ಅಕಿ ಫುಲ್ ಖುಷಿ ಆಗಿ “ಓಕೆ, ಹತ್ತರ ಹತ್ತೋಲೇ ನೀ” ಅಂದ್ಲು.

ಅದು ಯಾವ ಮಾಯದಲ್ಲಿ ಕೊರೆಗಾವ್ ಪಾರ್ಕಗೆ ಹೋಗಿದ್ನೊ ಇವತ್ತಿನವರಗು ನೆನಪಿಲ್ಲ,  ಹೋಗೊ ಅಷ್ಟೊತ್ತಿಗೆ ಸೂರ್ಯ ಅಮೇರಿಕದವರ ನೆತ್ತಿ ದಾಟಿದ್ದ, ಹುಣ್ಣಿಮಿ ರಾತ್ರಿ ಅನ್ನಿಸ್ತದ, ಎನ ನೋಡಿದ್ರು ಮಿರು ಮಿರುಗು. The Beastಗೆ ಸುಸ್ತಾಗಿತ್ತು ಅನ್ನಿಸ್ತದ ಇಲ್ಲಾ ನಂಗ ಹಂಗ ನಶೆ ಇಳಿಳಿಕ್ಕೆ ಹತ್ತಿತ್ತೊ, ಶೌಕಾಷ ಒಂದ ರೋಡ್ ಕ್ರಾಸ್ ಮಾಡಿ ಮನಿ ಕಡಿ ಹೋಗಿ ಬಿತ್ಕೊಂಡು ಮಠ ಸಿನೆಮಾ ನೋಡೊಣನ್ನಿಸ್ತು, ಆವಾಗ ಅಕಿ ನನ್ನ ಕಣ್ಣಿಗೆ ಬಿದ್ದಿದ್ದು, ಮೊದಲ ಹೇಳಿದ್ನಲ್ಲ ಹುಣ್ಣಿಮಿ ಅಂತ, ಅಕಿ ಮಾದಕ ಚೆಲುವಿಗೆ  ನನ್ನ ಕನ್ನಡಕನು ಜೊಲ್ಲು ಸುರಿಸಿತ್ತು. ಅರ್ಧ ತೊಡಿಯಷ್ಟ ಕಾಣ್ಹೊಂಗ ತೀಳಿನೀಲಿ jeans, ಶುಬ್ರಾತಿಶುಭ್ರ ಬಿಳಿ ತೋಳಿಲ್ಲದ ಅಂಗಿ, ದಂಗು ಹೋಡದು ನಿಂತಬಿಟ್ಟೆ, ದೂರದಲ್ಲೆಲ್ಲೋ ಮರಾಠಿ ಹಾಡು “ಅಪ್ಸರಾ ಆಲಿ”. ಯಾವ ಪುಣ್ಣಾತ್ಮನ ಹಿಂದ ಕುಂತು ಎಲ್ಲಿಗ ಹೋಂಟಿದ್ಲೊ, ನನ್ನ ಮನಸ್ಸಿಗೆ “ಇವತ್ತು ಬಿಟ್ಟಿ, ನೀ ಕೆಟ್ಟಿ” ಅನಸಿರಬೇಕು, ಮೆದಳಿಂದ ಸೀದಾ The Beastಗೆ ಸಿಗ್ನಲ್ ಹೋಗಿತ್ತು. ನನ್ನ ಪುಣ್ಯ ದೊಡ್ಡದು, ಅವಂದು pulser. ಮುಂದಿನ ಟ್ರಾಫಿಕ್ ಸಿಗ್ನಲ್ನಾಗ ಸಿಕ್ಕ, ಕೆಂಪಿತ್ತು ಲೈಟ, ಬಾಜೂಕ The Beast ನಿಲ್ಸಿದೆ, “ಕನಕ” ಅಂತ ಬರದಿತ್ತು, ಸುಡ್ಲಿ, ಕನ್ನಡದೋರು, ನನ್ನ The Beast 180CCಯಿಂದ 350CCಗೆ upgrade ಆಗಿತ್ತು.

ಅಮುಲ್ ಬೇಬಿ(110kgದು) ಮುಖ ಮಾಡಿ “ಈ ಕರ್ವೆ ನಗರ್ ಗೆ ಹೇಗೆ ಹೋಗೊದು, ಸ್ವಲ್ಪ ಹೇಳ್ತಿರಾ” ಬರದ ಬೆಂಗಳೂರು ಕನ್ನಡದಾಗ ಅಮಾಯಕವಾಗಿ ಕೇಳ್ದೆ. ಆಕಿ ನನ್ನ ಕನ್ನಡ ಕೇಳಿ ಅರ್ಧ ಖುಷಿ, ಅರ್ಧ ಆಶ್ಚರ್ಯದಾಗ  “ಸರ, ಅದು ಭಾಳ ದೂರೈತಿ, ಒಂದ ಕೆಲ್ಸ ಮಾಡ್ರಿ, ಔಂದವರಗು ನಮ್ಮ ಹಿಂದಗುಟ ಬರ್ರಿ, ಅಲ್ಲಿಂದ ಸಲಿಸು”. ಸರ್ವಜ್ಞಾನ ಖುದ್ದು ಬಾಜೂಕ ಬಂದು ಸ್ವರ್ಗಕ್ಕೆ ಕಿಚ್ಚು ಹಚ್ಚಿದ್ದ.
ನಾನು :“ಇಲ್ರಿ, ನಾ ಲಗೂನ ಹೋಗಬೇಕು, ದಾರಿ ಹೇಳ್ರಿ ಸಾಕು” .
ಅಕಿ: “ಹಂಗಾದ್ರ, ಸೀದಾ ಹೋಗ್ರಿ, signal ಸಿಗ್ತದ, ಬಲಕ್ಕ ತೋಗೊಂಡು 16km ಸರಳ ಹೊದ್ರ ವಾಕಡ ಬ್ರಿಡ್ಜ್ ಸಿಗ್ತದ, ಅಲ್ಲಿಂದ ಎಡಕ್ಕ 2೦km ಹೋದ್ರ ವಾರಜೆ”
ಅಕಿ ಹೇಳೊದು ಕೇಳಸ್ಕೊಂಡೋರು ಯಾರು, ಮುಖ ತುಂಬಿದ ಬೆಳದಿಂಗಳು. ನೋಡ್ತಾನ ಇರಬಕು, ಹಗಲು-ರಾತ್ರಿ.
ನಾನು: “ಅರ್ಥಾತ ಬಿಡ್ರಿ” The beast ಹೊಂಟತು ಮುಂದಕ್ಕ, ಮುಂದಿನ ಸಿಗ್ನಲ್ ಬರೋಷ್ಟತ್ತಿಗೆ ಮನಸು ಅರ್ಧ ಬೆಂದಿರೊ ಶೇಂಗಾಕಾಳು. ಇನ್ನೊಂದು ಸಲ ನೋಡೊಣ ಅಂತ - ನನ್ನ ಮನಸ್ಸು, The Beast ಮತ್ತು ನನ್ನ ಕನ್ನಡಕ ಅವಿರೋಧಕ ಮತ ಚಲಾಯಿಸಿದ್ವು. ಮತ್ತದ ಅಮುಲ್ ಬೇಬಿ ಮುಖ ಮಾಡ್ಕೋಂಡು ನಿಂತೆ. ಅಕಿನೂ ಅವಂಗೂಡ ಬಂದು ನಿಂತ್ಕೊಂಡ್ಲು, ಅಂವಂದು ಸ್ವಲ್ಪ ಸಿಟ್ಟಿನ ಮಾರಿ ಆಗಿತ್ತು,
 ಅಕಿ: “ಮತ್ತೇನಾತ್ರಿ, ಅದಕ್ಕ ಹೇಳಿದ್ದು, ಔಂದವರಗೂ ನಮ್ಮ ಹಿಂದಗುಟ ಬರ್ರಿ ಅಂತ”
ಅವ: “ವೆನ್ನೆಲ, ಕರೆಟ್ಗ ಚಪ್ಪು ವಾಳ್ಳಿಕಿ”.
ವೆನ್ನೆಲ ಅಕಿ ಹೆಸರು, ಆಂಧ್ರದವರು ನಮ್ಕಡೆ ಬಂದು ಭಾಳ ವರ್ಷ ಆಗಿತ್ತೇನೋ. ರೂಪಕ್ಕ ತಕ್ಕ ಹೆಸರು, ಬೆಳದಿಂಗಳು ಅಂತ ಅರ್ಥ, ನಾವು ಪೂರ್ಣಿಮಾ, ಪೌರ್ಣಿಮೆ, ತೇಜಸ್ವೀನಿ ಅಂತೆಲ್ಲ ಇಡ್ತೆವಿ.
ನಾ: “ಇಲ್ಲಿಂದ ಬಲಕ್ಕೊ, ಎಡಕ್ಕೋ, confuse ಆಯ್ತು, ಮುಂದಿಂದೆಲ್ಲ ನೆನಪಿದೆ”.
ನಕ್ಕಳು ನೋಡ್ರಿ ಆವಾಗಕಿ, ಸುಹಾಸಿನಿ “ಅಮೃತವರ್ಷಿಣಿ”ಲಿ  ನಗೋಬೇಕಾದ್ರ ನಾನು ರಮೇಶ್ ಆಗಿ “ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ” ಭ್ರಮಾತೀತ.
ಮತ್ತ ಮುಂದಿನ ಸಿಗ್ನಲ್ ಗೆ ಮತ ಚಲಾವಣೆ, ಅವಿರೋದ ಆಯ್ಕೆ, ಅಮುಲ್ ಬೇಬಿ ಮುಖ, ಅಕಿ ನಗೋದು, ಕಿವಿಯಾಗ “ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ”, ಭ್ರಮಾತೀತ.
ಮತ್ತ ಮುಂದಿನ ಸಿಗ್ನಲ್, ರೀಪೀಟ್, “ಬೆಳದಿಂಗಳಾಗಿ ಬಾ, ತಂಗಾಳಿಯಾಗಿ ನೀನು”, ಭ್ರಮಾತೀತ.
ಮತ್ತ ಮುಂದಿನ ಸಿಗ್ನಲ್, ಆ ದಿಕ್ಕಿಗೆ ದುರ್ಗಾ ಕೆಫೆ, ಬೇಕಾದ್ದಾಗ್ಲಿ, ಹೊಲ ಹೋಗಿ ಮನಿ ಉಳಿಲಿ, ಅಕಿಗ ಒಂದು ಕೋಲ್ಡ್ ಕಾಫಿ ಕುಡಸಿ ಪರಿಚಯ ಮಾಡ್ಕೊಳ್ಳೊದ ಸೈ. “ಹುಣ್ಣಿಮೆ ಚಂದಿರನ ಹೆಣ ಬಂತು ಮುಗಿಲಾಗ ತೇಲುತ ಅಗಲ”, ಮ್ಯಾನೇಜರ್ ಫೋನ್ ಮಾಡಿದ್ರ ಕಾಲರ್ ಟ್ಯೂನ್ ಅದು. ಒಲ್ಲದ ಮನಸಿಂದ ಎತ್ತಿದೆ, “ಶ್ರೀ, ಈವತ್ತು ಶುಕ್ರವಾರ, 9:30  ಆಗೋಗಿದೆ already, 10:30 meeting ನೆನಪಿದೆ ತಾನೆ, ನೀಂದೆ ಇವತ್ತು presentation, ಬೇಗ ಬಂದಬಿಡಮ್ಮ ಪ್ಲೀಸ್”.

ಸಿಡಿಲ ಬಡಿದಂಗಾಗಿತ್ತು, ಕಣ್ಣುಜ್ಜಕೋಂಡು ನೋಡಿದ್ರ, ಮೈಲಿಗೆ ಹಾಸಿಗೆ, ಜೊಲ್ಲು ಬಾಯಿ, ಕಂಡಿದ್ದೆಲ್ಲಾ ಕನಸು ಅಂತ ಜ್ಞಾನೋದಯ ಆಗಿದ್ದು ಕಮೋಡ ಮ್ಯಾಲ ಒಗಿಯಾಕ ಕುಂತಾಗ. ಆಫೀಸ್ ಮುಗುಸಿ ಶಬರಿಗೆ ಹೋದೆ, “ಓಯ್ ಶ್ರೀ, ಇವತ್ತೆಂತ, ಕಂಭ (full bottle) ಹತ್ಲಿಕ್ಕುಂಟಾ” .......



Sunday, July 7, 2013

Goa, again !!!!!




ಎಲ್ಲರ ಮನಸ್ಸು ತಾಜಾ ತಂಗಾಳಿ ಬಯಸಿತ್ತು, ಪ್ರತಿದಿನಗಳ ಜಂಜಾಟದಿಂದ, ಕಣ್ಣಿಗೆ ಕಾಣುವ ಅದೇ ನೋಟಗಳಿಂದ, ಬೆಟ್ಟಿಯಾಗುವ ಅದೇ ಮನುಷ್ಯರಿಂದ ಒಂದೇ ಒಂದು ಪುಟಾಣಿ ವಿರಾಮಕ್ಕೆ ಹಾತೋರೆಯುತಿತ್ತು. ಪ್ರತೀ ತಿಂಗಳು ೧೩ ಕ್ಕೆ ಖಡಾಖಂಡಿತವಾಗಿ ಬೆತ್ತಿಯಾಗುವ ನಾವು ೫ ಗೆಳೆಯರು ಒಮ್ಮತದಿಂದ ಒಪ್ಪಿದ ಏಕೈಕ ನಿರ್ದಾರ, ೩ ದಿನಗಳ ಗೋವಾ ಪ್ರಯಾಣ.


Monday, August 30, 2010

ಮುಖ ಮುಸುದಿ ಮಾರಿ ಮೊಗ

"ಧಾರವಾಡ ಭಾಷೆ"
ಹೆ೦ಗರ ಇರವಲ್ದ್ಯಾಕ ಅಕೀ ಮುಸುಡಿ,
ನಾನ ಇರಬೇಕು ಅಕೀ ಮನಸೀಡಿ ......

"ಮ೦ಡ್ಯ ಭಾಷೆ"
ಹೆ೦ಗಿದ್ರೆ ಎನು ಮಗಾ,
ಕೊಟ್ರೆ ಸಾಕು ಅವಳ ಮನಸ್ಸಲ್ಲಿ ನನ್ಗೆ ಜಾಗಾ ...

"ಮ೦ಗಳೂರು ಭಾಷೆ"
ಹೇಗಾದರೂ ಇರಲಿ ಅವಳ ಮುಖ ಮಾರಾಯ
ನನಗೆ ಬ೦ಗಾರದ ಅರಮನೆ ಆಕೆಯ ಹ್ರಿದಯ

(ಮು೦ದುವರೆಯುತ್ತದೆ)

Saturday, August 28, 2010

ಮಥೆರಾನ್ 2008

ಮಥೆರಾನ್, ಒಂದು ಸುಂದರ ದೃಶ್ಯಗಳ ಸುರಿಮಳೆ, ಪೋಲಿ ಜೋಕುಗಳ ಗಂಟು, ಮನಸ್ಸು ಮುಗಿಲಿಗೆ ಹೋಗಿ ಮೋಡಗಳನ್ನು ಮುಟ್ಟಿದ ಅನುಭವ. ಸಖತ್ introvert ಆಗಿದ್ದ ನಂಗೆ corporate ಲೈಫ್ ಅಲ್ಲಿ entry ಆದ ಮೇಲೆ ಎರೆಡನೆ trip.


ರವಿ ಮಾಮ, ಶಂಕ್ರಣ್ಣ ಪುಣೆಗೆ ಬಂದ ಹೊಸದರಲ್ಲಿ  ಸಿಗೋಣ ಅನ್ಕೊಂಡ್ವಿ, ಆದರೆ ಸಿಕ್ಕಾಪಟ್ಟೆ lazy ಆಗಿರೋ ನಂಗೆ ಅದು ಆಗಲೇ ಇಲ್ಲ. Email ಅಲ್ಲೇ ನಮ್ಮ ಮಾತು ಕಥೆ ನಡೀತಾ ಇತ್ತು. ಒಂದು ದಿನ ರವಿ ಮಾಮ ಮಾಥೆರಾನ್ trip ಹೋಗುವಾ ಮಾಮ ಅಂಥ ಹೇಳಿದ, ಸರಿ ರವಿವಾರ ಹೊರಡೋದು ಅಂಥಾಯ್ತು :)

ಬೆಳಿಗ್ಗೆ ೪ ಘಂಟೆಗೆ ಎದ್ದು ಬಿಸಿ ನೀರಲ್ಲಿ ಸ್ನಾನ ಮುಗುಸ್ಕೊಂಡು ೫ ಘಂಟೆಗೆ ಸಿದ್ಧ. ೬ ಆಯಿತು, ೭ ಆಯಿತು ಮಾಮಗಳ ಪತ್ತೇನೇ ಇಲ್ಲ :( ಅಷ್ಟರಲ್ಲಿ ನಂದು ಒಂದು jump ನಿದ್ದೆ ಆಗಿತ್ತು . ಸರಿ ಸುಮಾರು ಏಳು ವರೆ ಗೆ ನನ್ನ mobile ರಿ೦ಗಾಯಿಣಿಸಿತು. ಆ ಕಡೆಯಿ೦ದ ರವಿ ಮಾಮ, ಮಾಮ chowk ಗೆ ಬಾ, ಹೊರಡುವಾ ಅ೦ದಿದ್ದ :)

ಸದಾ ಮುಗುಳ್ನಗುವ ದೀಪ, Eucs(famous for her looks), ಶ೦ಕ್ರಣ್ಣ,(ಅವ೦ದ ಭಾಷೆಯೊಳಗ ಹೇಳ್ಬೇಕಂದ್ರ Classic  ದೋಸ್ತ ), ರವಿ ಮಾಮ (for no reasons, I truly admire him !!!), ಥೋ೦ಮಬ್ರೆ (ಕೆಟ್ಟ ಉಡಾಳ್) ....

ಗಾಡಿ ಅಲ್ಲಿ ತಿ೦ದ ಆ ಬ್ರೆಡ್ ಜ್ಯಾಮ್, ದಾರಿಯಲ್ಲಿ ಮುಕ್ಕಿದ ವಡಾಪಾವ್ , ಮಾಥೆರಾನ್ ಬೆಟ್ಟದ ಮೇಲೆ ಕುದುರೆ ಸವಾರಿ, ನನ್ನ ಹೊಟ್ಟೆ ಕೆಟ್ಟು ಹೋಗಿದ್ದು, ದೀಪಾ- ತೋ೦ಬರೆ ಯಾ ಜೋಕುಗಳು, ರವಿ ಮಾಮನ, ಶಂಕ್ರಣ್ಣನ ನಗು, ರೆಸಾರ್ಟ್ ಅಲ್ಲಿ ಖಾಲಿ ಮಾಡಿದ ಚಿಕನ್, Eucs ನ  "Bring the veg biriyani" dialogue ..... ಸಮಯ ಸಿಕ್ಕಾಗ ಇನ್ನೋಷ್ಟು ಬರೀತೀನಿ 

                                                           (ಮು೦ದುವರೆಯುತ್ತದೆ.)