ಅಪರೂಪಕ್ಕೆ ಮುಂಜಾನೆ ಬೇಗ ಎಚ್ಚರ ಆತು, ಅರ್ಧ ತಾಸು ಮಂಚದಾಗ ಹೊರಳಾಡಿ ಬೇಜಾರಾಗಿ, ವಾಯು ಸಂಚಾರಕ್ಕಂತ(walk) ಹೊರಟೆ. ಗೊತ್ತಲ ನಿಮಗ, ಮುಂಜ್ ಮುಂಜಾನೆ apartment ಒಳಗ school bus ಸಾಲಗ ನಿಂತು ಬಿಟ್ಟಿರ್ಥವು, ಹ್ಯಾಪ ಮೋರಿ ಹಾಕ್ಕೊಂಡು, ಜೊಲ್ಲು ಸುರುಸ್ಕೊಂಡು ಹೋಗೋ ಮಕ್ಕಳೂ ಚಂದ, ಆಗ್ದಿ tip top ready ಆಗಿ ಇಸ್ತ್ರಿ ಬಟ್ಟೆ, ಮುಖದ ಮ್ಯಾಲ ತಟ್ಗ ತಟಗು powder ಹಚ್ಚಕೊಂಡು, ತಲಿಗೆ ಎಷ್ಟು ಬೇಕೋ ಅಷ್ಟು ಎಣ್ಣಿ ಹಚ್ಚಿ, ಬೈತಾಲಿ ತಗದು ಬಾಚಿ, ಪಾಲಿಶ್ ಮಾಡಿರೋ shoe ಹಾಕ್ಕೊಂಡು ಹೋಗೋ ಮಕ್ಕಳೂ ಚಂದಾನ. ಮಕ್ಳು ಅಂದಮೇಲೆ ಅವು ಹೆಂಗಿದ್ರು ಚಂದಾನ, ಅಲ್ಲೇನು? (ನಾ first category ಮಗು). ಈ ಗದ್ದಲದೊಳಾಗ, ಮುದ್ದಾದ ಮಗು, ಬಣ್ಣ ಬಣ್ಣದ ಅಂಗಿ ಹಾಕ್ಕೊಂಡು, ಅಕಿಗಿಂತಾನು ಮುದ್ದಾದ ಹೆಜ್ಜೆ ಹಾಕ್ಕೊಂಡು ನಡ್ಕೊಂಬರ್ತಿದ್ಲು. ನನ್ನ ನೋಡದಾಕೆ "ಶ್ರೀಅಪ್ಪಿ, how's my new dress ? Happy Holi uncle" ಅಂಥಾ ನನ್ನ ಸಮ್ಮತಿ ಇಲ್ದೆ ನನ್ನ chubby cheeks ಗೆ ಗುಲಾಬಿ ಬಣ್ಣ ಹಚ್ಚಿ ಹೋಗೆ ಬಿಟ್ಟಳು ಬಸ್ ಹತ್ತಲಿಕ್ಕೆ.
ನನ್ನ ವಾಯುವಿಹಾರ ಮುಗಿದ ಮ್ಯಾಲೆ , ಬಿಸಿಲ ಕಾಯಿಸ್ಕಂತ ampitheatre ಅಲ್ಲಿ ಕೂತಿದ್ದೆ. ನಾ ಸಣ್ಣಾವ ಇದ್ದಾಗ ಹೋಳಿ ಹಬ್ಬ ಹೆಂಗೀತ್ತು ಅಂಥ ವಿಚಾರ ಮಾಡ್ಕೊಂತ ಮನಸ್ಸು ಆ ಕಡೆ ಜಾರಿದ್ದು ನಂಗ ಗೊತ್ತಾಗಲೇ ಇಲ್ಲ.
ಹೋಳಿಗೆ ಇನ್ನೊಂದು ವಾರ ಐತಿ ಅಂದ್ರ ಸಾಕು, ನಮ್ಮವ್ವ ನಮ್ಮ ನಾಕೂ ಜನದ್ದು ಹಳೇ ಅರಬಿ ಹುಡುಕಿಟ್ಟತಿದ್ಲು, ಅವು ಇನ್ನು ನಮಗ ಆಗಿ ಬರಲ್ಲ, ಇನ್ನೊಂದು ಸಲಾ ಸುಮ್ನ ಹಂಗ ನೋಡಿದ್ರ ಸಾಕು ಹರದ ಹೋಗಿ ಬಿಡಬೇಕು ಅಂಥಾ ಅರಬಿ ಅವು. ಸರಿ ಸುಮಾರು ಮೂರು ನಾಕು ವರ್ಷದಿಂದ ಸತತವಾಗಿ ಹಾಕ್ಕೊಂಡು ಉಜ್ಜಾಡಿ ಸಾಕಲೇ ಅಂದು ಬೀರೂ ಸೇರಿದ ಅರಬಿ ಅವು. ಅವನ್ನ ಹೋಳಿ ಆಡಾಕಾಂತಾನ ನಮ್ಮವ್ವ ತಗದು ಇಟ್ಟಿದ್ದು ಅಂಥ ನಮಗ್ ಆವಾಗ ಗೊತ್ತಾಗತಿತ್ತು. ಪಿಚಗಾರಿ ಕೋಡ್ಸು ಅಂಥಾ ಒಂದು ವಾರ ಹಿಂದ ಅಪ್ಪನ್ನ ಕಾಡಿ, ಬೇಡಿ, ಅತ್ತು ಕರ್ದು, ನಾಕ್ ಜನಕ್ಕ ಒಂದು ಪಿಚಾಗಾರಿ ತರಬಹುದು ಅಂಥ ಅನುಮೋದನೆ ಸಿಗ್ತಿತ್ತು.
ಎಲ್ಲಾ ಹಬ್ಬ ಹುಡಿಗೇರು ಹಬ್ಬ ಅನ್ನಿಸಿ ಬಿಡೋದು, ಅವರಿಗೆ ಹೊಸ dress ಕೊಡಿಸೋದು, ಪೂಜೆ ಪುನಸ್ಕಾರ, ಹಬ್ಬದ ಅಡಿಗಿ ಎಲ್ಲಾ ಅವರಿಗೆ ಏನ್ ಬೇಕು ಅದು, ಹೆಂಗ್ ಬೇಕೋ ಹಂಗ, ಎಷ್ಟು ಬೇಕಾದ್ರೂ. ಹೋಳಿ ಮಾತ್ರ ಅಗ್ದಿ ಹುಡುಗರ ಹಬ್ಬ ಅನ್ನಿಸೋದು.ಯಾರ್ಯಾರೋ ಮನ್ಯಾಗ ಹಳೇ ಅರಬಿ, ಕುರ್ಚೆ, ಹಲಗಿ, ಹಗ್ಗ ಎನ್ ಕೈಯಗೆ ಸಿಗುತ್ತ್ ಅದು , ಕೇಳಿದಾಗ ಕೊಟ್ರೋ, ಸರಿ, ಇಲ್ಲಾ ತುಡುವು ಮಾಡೋದು, ಕಾಮಪ್ಪನ ಸುಡುಬೇಕಲ. ನಮ್ಮನ್ನ ಯಾರರ ಹಿಡಿದು ಕೇಳಿದ್ರ ಉತ್ತರ ತಯಾರಿತ್ತು "ಕಾಮಪ್ಪನ್ನ ಮಕ್ಕಳು, ಕಳ್ಳ ** ಮಕ್ಕಳು, ಏನೇನು ಕದ್ದರು, ......."
ಈ ಉಡಾಳಾಗಿರಿ ಒಂದು ಕಡೆ ಆದ್ರ, ಇನ್ನೊಂದು ಗುಂಪು ಇರ್ತಿತ್ತು, ವರ್ಷಾ ಪೂರ್ತಿ ನಮ್ಮ ಓಣಿ, ಪಕ್ಕದ ಓಣಿ, ಹತ್ತಾರು ವಠಾರದಾಗ ಏನು ಗದ್ದಲ ಆಗೇವು, ಯಾರಿಗೆ ಯಾರ ಮುಖಾ ಕಂಡ್ರೂ ಆಗಂಗಿಲ್ಲ, ಅತೀ ಮುಖ್ಯವಾಗಿ, ಆಜೂ ಬಾಜ ಮನೆಯವರಿಗೆ ಆಗಿ ಬರೋ ಹಂಗಿಲ್ಲ, ಅಂಥಾ ಎಲ್ಲಾ ಮನೆ ಹಾಳ್ information collect ಮಾಡಿ, ಹೋಳಿ ಹಿಂದಿನ ರಾತ್ರಿ, ಅವರ ಅಂಗಳದಾಗಿನ ಸಾಮಾನ್ ಇವರ ಅಂಗಳದಾಗ, ಇವರದ್ದು ಅವರ ಅಂಗಳಾದಾಗ. ಬೆಳಿಗ್ಗೆ ಎದ್ದು ಇಬ್ಬರೂ ಮನೆಯವರು ಆ ಸಾಮಾನ್ ತೊಗೊಳೋಕಾಂತ್ ಮಾತಾಡಿ ದೋಸ್ತರಾಗಿದ್ದು ಕಮ್ಮಿನ, ಬೆಳ್ ಬೆಳಿಗ್ಗೆ ಜಗಳ ಹತ್ತಿದ್ದು ಜಾಸ್ತಿ. ಯಾವ ಮನ್ಯಾಗ ಜಗಳ ಜಾಸ್ತಿ ಮಜಾ ಕೊಡೋದು ಆ ಮನಿ ಅಗಸಿ ಕಟ್ಟಿ ಮ್ಯಾಲ ನಮ್ಮ ಗುಡಾರ.
ಅವ್ವಾ ಎಷ್ಟ ಹೇಳಿ ಕಳಸಿರ್ಲಿ, "ನೋಡಪ್ಪಿ, ಗಲ್ಲಕ್ಕ ಚೂರ ಚೂರು ಬಣ್ಣ ಹಚ್ಚು, ಅವರೂ ಹಚ್ಚತಾರ, ಹಚ್ಚಿಸ್ಕೋ, ಹನ್ನೆರಡು ಅಷ್ಟೊತ್ತಿಗೆ ಮನ್ಯಾಗ ಇರಬೇಕು, ಸರಿನಾ". "ಹೂನಬೆ " ಅಂಥಾ ಗಲ್ಲ ಅಲ್ಲಾಡಿಸಿ, ಮನಿಯಿಂದ ಹೋರಾಗ ಬಿದ್ದ ಅರ್ಧ ತಾಸಿನಾಗ ಬಟ್ಟಿ ಛಿದ್ರ ಛಿದ್ರ ಆಗಿ ಕರೆಂಟ್ ವೈರ್ ಮ್ಯಾಲ ನೇತಾಡ್ತಿರ್ತಿದ್ವು. ಗಲ್ಲಕ್ಕ, ಹಣಿಗೆ ಅಷ್ಟ ಬಣ್ಣ ಹಚ್ಚೋ ಮಕ್ಕಳ ಅಲ್ಲಾ ನಾವು, ಎದರಿಗೆ ಬರೋವನ ಅಂಗಿ ಗುಂಡಿ ಕಿತ್ತು ಎದಿಗೆ, ಬೆನ್ನಿಗೆ ಕರ್ಮಾಟ ಎಲ್ಲಾ ಹಚ್ಚಿ, ತಲಿಗೆ ಒಂದು ತತ್ತಿ(egg) ಒಡದು, ರಾಡಿ ರಂಪಾಯಣ ಮಾಡಿ-ಮಾಡಿಸ್ಕಂಡು, ಹೆತ್ತವ್ವನ ಮುಂದ ಹೋಗಿ ನಿಂತ್ರ, "ಆವಾ ಹೋಳಿ ಆಡಾಕ ಹೋಗ್ಯಾನಪ, ಬಂದ್ರ ಯಾರು ಬಂದಿದ್ರು ಅಂಥ ಹೇಳ್ಲಿ, ಏನರ urgent ಕೆಲ್ಸಾ ಐತಿ" ಅಂಥಾ ಕೇಳಿದ್ದೂ ಉಂಟು. "ನಾನಬೆ " ಅಂಥಾ ಒಡೆದ ಗಂಟಲೊಳಗ ಹೇಳಿದ್ರ ನನ್ನ ಮಗ ಅಂಥ ಗುರ್ತು ಹಿಡಿಯಾಕ ಆಕೀಗೇ ಎರೆಡು ಮೂರು ನಿಮಿಷಾನಾದ್ರು ಬೇಕಿತ್ತು.
ಬಣ್ಣ, ಗ್ರೀಸ್, ನಾಲಿ ನೀರು, ತತ್ತಿ, ಎದು ಎದ್ರಾಗ ಹೋಳಿ ಆಡಿಲ್ಲ. ಮನಿಗೆ ಬರೋ ಅಷ್ಟ್ರೋಳಾಗ 3-4 ಘಂಟೆ ಆಗೋದು, ಹೊಟ್ಟಿ ಹಸದು ತಳ ಮುಟ್ಟುತ್ತಿತ್ತು, ಆವಾಗ ಮನಿಗೆ ಬರ್ತಿದ್ವಿ. ಮನಿಗೆ ಬಂದ ಮ್ಯಾಲ ಒಂದು drum ನಾಗ ಬಣ್ಣ ಕಲಸಿ, ಚಂಬು, ವಾಟೆ, ಲೋಟ ಏನ್ ಸಿಕ್ಕಿತೋ ಅದರೊಳಗ ಮನೆರಿಗೆ ಎಲ್ಲಾ ಉಗ್ಗಿ, ಅಕ್ಕ ಪಕ್ಕದ ಮನೆಯವರಿಗೂ ಉಗ್ಗಿ ಆಟಾಡಿ ಬರೋ ಅಷ್ಟೊತ್ತಿಗೆ ಕಟ್ಟಗಿ ಒಲ್ಯಾಗ ಬಿಸಿ ಬಿಸಿ ನೀರು ಕಾದಿರವು, ಕೊಬ್ಬರಿ ಎಣ್ಣೆ ಮೈಗೆಲ್ಲ ಹಚ್ಚಿ, ತಿಕ್ಕಿ ತೀಡಿದ ಮೇಲೆ ಸ್ನಾನ, ಆವಾಗ ನಮ್ಮ ಅಮ್ಮಂಗೆ ಖಾತ್ರಿ ಆಗೋದು ನನ್ ಮಗಾ ಇವಾ ಅಂಥ.
ಅಪ್ಪನಿಂದ ಹೊಡತಗಳು, ಅವ್ವನಿಂದ ಬೈಗುಳಗಳು ಇರ್ದ ಯಾವ ಹೋಳಿ ಹಬ್ಬ ಪೂರ್ತಿ ಆದೀತು. "ಹೋಳಿ ಅದ ಮಗನ" ಅಂಥಾ ಸಿಕ್ಕಿ ಸಿಕ್ಕಿದೋರಿಗೆ ಏನೇನೋ ಹಚ್ಚಿ ಬಂದ್ರ, ಅವರೆಲ್ಲ ಅವರಪ್ಪನ್ನ ಕರ್ಕೊಂಬಂದು ನಮ್ಮಪ್ಪನ ಜೊತೆ ಒಂದೆರೆಡು ದುಂಡು ಮೇಜಿನ ಸಭೆ ಮುಗಿದಮೇಲೆ ನಮಗೆ ಒಂದು ಅಂದಾಜು ಸಿಗೋದು, ಇವತ್ತು ಎಷ್ಟು ಹೊಡ್ತಾ ಬೀಳಬೋದ ಅಂಥ.
ಹಿಂಗೆಲ್ಲಾ ಆಡಿದ ನಾವು, ನಾಗರೀಕ ಸಮಾಜದಲ್ಲಿ , ಹೊಸಾ ಬಿಳಿ ಬಟ್ಟೆ ಹಾಕ್ಕೊಂಡು, ಗಲ್ಲ ಗದ್ದಕ್ಕೆ ಅಷ್ಟೇ ಪುಡಿ ಬಣ್ಣ ಹಚ್ಚಿ "Happy ಹೋಳಿ" ಅನ್ನೋ ಸ್ಥಿತಿಗೆ ಬಂದು ಬಿಟ್ಟೇವಿ.
ಹೋಳಿ, ನಮ್ಮ ವರ್ಷದ ಕೊನೇ ಹಬ್ಬ, ವರ್ಷಪೂರ್ತಿ ಬೆಳಿಸಿಕೊಂಡ ಕಾಮನೆಗಳು, ಸೋಲುಗಳು, ಬಂಧನದ ಬೇಲಿಗಳನ್ನ ಸುಟ್ಟು, ನಮ್ಮೆಲ್ಲ ಮುಖವಾಡ, ಕಳಂಕ ಎಲ್ಲಾ ಕಳಚಿ ಹೊಸಾ ವರ್ಷವನ್ನ ನವೀನ ಮನಸ್ಸಿಟ್ಟು ಬರಮಾಡಿಕೊಳ್ಳೋಕೆ ತಯಾರಿ ಮಾಡೋಣ.
ಹ್ಯಾಪಿ ಹೋಳಿ.