ಇತ್ತೀಚಿಗೆ ನಮ್ಮ ಎರೆಡು ವರ್ಷದ ವಸತಿ ಸಮುಚ್ಚಯದಲ್ಲಿ, ಹಿಂದೆಂದೂ ನಡೆಯದ ಘಟನೆ ಕೆಲವರನ್ನು ಘಾಸಿಗೊಳಿಸಿತ್ತು. ಅಂದಾಜು ಸಾವಿರ ಮನೆಗಳು ಇರುವ ಒಂದು ಪುಟ್ಟ ಹಳ್ಳಿಯೇ ಸರಿ. ಹತ್ತು ಎಕರೆಯ ಜಾಗದಲ್ಲಿ ಸಾವಿರ ಮನೆಗಳು ಹಾಗು ಸಾಲು ಸಾಲು ಕಾರುಗಳು(ಸಾಲದ ಕಾರುಗಳು). ಎಲ್ಲರಿಗೂ ಎಲ್ಲರ ಮುಖ ಪರಿಚಯವಿದೆ, ಬೆರಳಿಕೆಯಷ್ಟು ಜನ ತಮ್ಮದೇ ಆದ ರೀತಿಯಲ್ಲಿ ಹೆಸರುವಾಸಿ. (ನೆನಪಿರಲಿ, ಕನ್ನಡಿಗರಿಗೆ Dr ರಾಜಕುಮಾರ ಅವರೂ ಗೊತ್ತು, ವೀರಪ್ಪನ್ ಕೂಡಾ.)
ಯಾವುದೋ ಒಂದು ವಿಷಗಳಿಗೆಯಲ್ಲಿ, ಒಬ್ಬ ಮಹಾಷಯ, ಇನ್ನೊಬ್ಬನಿಗೆ ಬೆರಳು ಸನ್ನೆ ಮಾಡಿ ಅವಾಚ್ಯ ಶಬ್ದಗಳ ಬಳಿಕೆಯಿಂದ ಅವಮಾನಿಸಿದ್ದು ನಮಗೆ ಜೀರ್ಣಿಸದೆ ನಮ್ಮ ಹಳ್ಳಿಯ ಚುನಾಯಿತ ಪಂಚಾಯತಿ ಪ್ರತಿನಿಧಿಗಳ ಬಳಿಗೆ ವಿಷಯ ತಲುಪಿಸಿದೆವು. ಉತ್ತರವಾಗಿ, ತಪ್ಪುಕೋರಿಕೆ ಪತ್ರ ಸಲ್ಲಿಸುವುದಾಗಿ ತೀರ್ಮಾನವಾಯಿತು. ವಿಷಯ ಇಷ್ಟೇ ಆಗಿದ್ದರೆ ಈ ಅಂಕಣ ಬರೆಯುವ ಜರೂರತ್ತು ನನಗೇನಿತ್ತು. ಆಗ ನನಗೆ ಹಾಗು ಕೆಲವು ಸಮಾನ ವಕ್ರ ಮನಸ್ಸಿನವರಿಗೆ ತೋಚಿದ್ದು, "ಸರಿ, ಇನ್ನು ಮುಂದೆ ಈ ನಾಗರಿಕ ಸಮುಚ್ಚಯದಲ್ಲಿ ಯಾರು ಯಾರಿಗೆ ಬೇಕಾದರೂ, ಯಾವಾಗಲಾದರೂ ಹೇಗೆ ಬೇಕೋ ಹಾಗೆ ವ್ಯವಹರಿಸಬಹುದು, ಅದು ಇನ್ನೊಬ್ಬರಿಗೆ ನೋವಾಗಿದ್ದರೆ ಮಾತ್ರ ಒಂದು ತಪ್ಪು ಕೋರಿಕೆ ಪತ್ರ ಕೊಟ್ಟರಾಯಿತು, ಅಷ್ಟೇ. ಅಲ್ಲವೇ ?".
ಈ ಘಟನೆ ಮತ್ತು ಅದಕ್ಕೆ ನಮ್ಮ ಚುನಾಯಿತ ಪ್ರತಿನಿಧಿಗಳ ತೀರ್ಮಾನ ನನಗೆ, Dr H. ನರಸಿಂಹಯ್ಯ, ಮಾಜಿ ಪ್ರಾಂಶುಪಾಲರು, National College, ಬಸವನಗುಡಿ, ಬೆಂಗಳೂರು ಅವರು ಹಂಚಿಕೊಂಡ ಅನುಭವ ನೆನಪಿಸಿತು, ಒಪ್ಪಿಸಿಕೊಳ್ಳಿ.
Dr H ನರಸಿಂಹಯ್ಯನವರು, H.N ಎಂದೇ ಚಿರಪರಿಚಿತ. ಅವರು ವಸತಿ ಶಾಲೆಯೊಂದರಲ್ಲಿ ಮೇಲ್ವಿಚಾರಕರಾಗಿದ್ದ ಕಾಲಘಟ್ಟ. ಶಿಸ್ತಿಗೆ ಇನ್ನೊಂದು ಹೆಸರೇ H.N ಎನ್ನುವಷ್ಟು ವಿದ್ಯಾರ್ಥಿಗಳಲ್ಲಿ, ಸಹೋದ್ಯೋಗಿಗಳಲ್ಲಿ ಛಾಪು ಇದ್ದ ಸಮಯವದು. ತುಂಬ ಅಶಿಸ್ತು ಅಗೌರವಕ್ಕೆ ಪಾತ್ರವಾದ ವಸತಿ ಶಾಲೆಗೆ ಇವರ ವರ್ಗಾವಣೆ ಆಯ್ತು, ಆದೇಶದಲ್ಲಿ H.N ಅವರಿಗೆ ವಿಶೇಷ ವಿನಂತಿ : ಆದಷ್ಟು ಬೇಗ ಆ ಶಾಲೆಯಲ್ಲಿ ಕಟ್ಟುನಿಟ್ಟು ಶಿಸ್ತಿನ ಸ್ಥಾಪನೆ ಆಗಬೇಕು, ಓದುತ್ತಿರುವರಲ್ಲಿ ಹೆಚ್ಚು ಪಾಲು ನಮ್ಮ ರಾಜಕಾರಣಿಗಳ ಮಕ್ಕಳು, ಸಂಭಂದೀಕರ ಮಕ್ಕಳು ಎಂದು.
H.N ಅವರು ಕರ್ತವ್ಯಕ್ಕೆ ಹಾಜರಾಗಿ, ಆ ವಸತೀಶಾಲೆಯ ಜವಾಬ್ಧಾರಿಯನ್ನು ಕೈಗೆತ್ತಿಕೊಂಡು ಎರಡು ಮೂರು ದಿನ ಪರಿಶೀಲಿಸಿದರು. ಎಲ್ಲರೂ ಅಶಿಸ್ತಿನ ಮೂಟೆಗಳೇ.
ಸರಿ, ಕ್ರಮಬದ್ಧತೆಯ ಮೊದಲ ಭಾಗವಾಗಿ ಬೆಳಿಗ್ಗೆ 6 ಘಂಟೆಗೆ ಎಲ್ಲರೂ ಶಾಲೆಯ ಆವರಣದಲ್ಲಿ ಸಾಲಾಗಿ ನಿಂತು ನಾಡಗೀತೆ " ಜೈ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ" ಹಾಗು ರಾಷ್ಟ್ರಗೀತೆ ಹೇಳಿ ಅವರವರ ಕೋಣೆಗೆ ತೆರಳಿ ಓದಿಕೊಳ್ಳ ತಕ್ಕದ್ದು ಎಂದು ಎಲ್ಲಾ ಕೊಠಡಿಗಳಿಗೆ ಆದೇಶ ಹೊರಡಿಸಲಾಯಿತು. ಇದಾದ ಒಂದೆರಡು ವಾರದಲ್ಲಿ H.N ಅವರ ಗಮನಕ್ಕೆ ಬಂದದ್ದು 4-5 ವಿದ್ಯಾರ್ಥಿಗಳು ಬೆಳಿಗ್ಗೆ 6 ಘಂಟೆಗೆ ಬರುತ್ತಿಲ್ಲವೆಂದು, ಎಷ್ಟು ಎಚ್ಚರಿಸದರೂ ನಿರ್ಲಕ್ಷಿಸಿದ್ದಾರೆಂದು.
ಆ ವಿದ್ಯಾರ್ಥಿಗಳನ್ನು H.N ಅವರ ಕೊಠಡಿಗೆ ಕರೆಸಿಕೊಳ್ಳಲಾಯಿತು. ಗುಮಾಸ್ತನಿಂದ ಹಿಡಿದು ಮುಖ್ಯೋಪಾದ್ಯಯರೆಲ್ಲರಿಗೂ ಕುತೂಹಲ, H.N ಅವರು ಈ ದರ್ಪದ ಮದದಾನೆಗಳನ್ನು ಹೇಗೆ ಪಳಗಿಸುತ್ತಾರೆಂದು. ವಿದ್ಯಾರ್ಥಿಗಳ ಮುಖದಲ್ಲಿ ಆತಂಕ, ಇವತ್ತು ಬದುಕುಳಿದರೆ ಸಾಕು ಎನ್ನುವಷ್ಟು ಭೀತಿ.
H.N ಅವರು ಘಾಂಬಿರ್ಯವಾಗಿ : ಎಷ್ಟು ಎಚ್ಚರಿಕೆ ಕೊಟ್ಟರೂ ನಿಮ್ಮ ತಪ್ಪು ತಿದ್ದಿಕೊಂಡಿಲ್ಲವೆಂದರೆ ನಿಮ್ಮದು ದಪ್ಪ ಚರ್ಮವೇ ಇರಬೇಕು, ಇರಲಿ, ನಿಮ್ಮಂಥವರಿಗೆ ಏನು ಮಾಡಬೇಕೆಂದು ನನಗೆ ಅರಿವಿದೆ. ಗಮನವಿಟ್ಟು ಕೇಳಿ, ಇನ್ನು ಮೇಲೆ ಒಂದುದಿನ ಗೈರು ಹೈಜರಾದರೂ ತಲಾ ೫ ಪೈಸೆ ದಂಡ, ಇದರ ಮೇಲೆ ನಿಮಗೆ ಬಿಟ್ಟಿದ್ದು, ಬೆಳಗಿನ ಪ್ರಾರ್ಥನೆಗೆ ಬರುವಿರೋ ಇಲ್ಲವೋ, ಎಂದು.
ಒಬ್ಬ ಹುಡುಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು ಹೊರಗೆ ನಿಂತ ಗುಮಾಸ್ತನ ತಮಟೆಗೆ ಬೀಳುವಷ್ಟು ಜೋರಾಗಿತ್ತು. ಆತ ತನ್ನ ಎಲ್ಲಾ ಜೇಬುಗಳನ್ನು ತಡಿಕಾಡಿ ಸಿಕ್ಕ ಅಷ್ಟು ಕಾಸನ್ನು ಒಟ್ಟುಗೂಡಿಸಿ, ಲೆಕ್ಕ ಹಾಕಿ, ಹೇಳಿದ್ದು : " ಸಾರ್, ನಾವು ಈ ಊರರಲ್ರಿ. ಬೆಂಗಳೂರು ಚಳಿಗೆ ನಸಿಕ್ನಾಗ ಎದ್ದೇಳಾಕ ಆಗವಲ್ದರಿ. ಅವ್ವಾಗ ಟಪಾಲು ಹಾಕೇವಿ, ಬೆಂಗಳೂರಿಗೆ ಕಳಸೋ ಹಂಗಿದ್ರ ಇನ್ನೂ ಒಂದೆರೆಡು ಖೌದಿ, ಕಂಬಳಿನೂ ಕಳಸವಾ ಅಂತ. ಇದು ಒಂದು ರುಪಾಯಿ ಐತ್ರಿ ಸರ್ರ, ಒಪ್ಪುಸ್ಕೋಬೇಕು. ನಾ ಇನ್ನೂ ೨೦ ದಿನಾ ಮುಂಜ್ ಮುಂಜಾನಿ ಬರಂಗಿಲ್ಲರಿ, ಹೊಟ್ಟಿಗೆ ಹಾಕ್ಕೋರಿ ".
H.N ಅವರು ನಗದೆ ಬೇರೆ ವಿಧಿಯಿರಲಿಲ್ಲ .
--------- ಶ್ರೀಅಪ್ಪಿ ---------------
No comments:
Post a Comment