ಮೊನ್ನೆಯಷ್ಟೆ ಯಾವುದೋ ಕಾರ್ಯದ ನಿಮಿತ್ತ ನನ್ನ ಹುಟ್ಟೂರಿಗೆ ಹೋಗಿದ್ದಾಗ ಕಾಲೇಜು ದಿನಗಳ ಗೆಳೆಯನೊಬ್ಬ ಆಕಸ್ಮಿಕವಾಗಿ ಸಿಕ್ಕ. ನನ್ನನ್ನ ಟಬ್ಬಾ, ಡುಮ್ಮಿ, ಮಾಮಾ ಎಂದು ಸಂಬೋಧಿಸಿಯೇ ನನ್ನ ಗೆಳೆಯರಿಗೆ ರೂಡಿ. ನನ್ನ ಆಕಾರ ಹಾಗೂ ಆವೃತ್ತಿಯೇ ಹಾಗೆ. ಇಷ್ಟ ಪಟ್ಟು ಬೆಳೆಸಿದ ದೇಹವನ್ನ ಕಷ್ಟ ಪಟ್ಟು ಕರಿಗಿಸಲಾದೀತೇ?
"ಟಬ್ಬಾ, ಹೆಂಗದಿ. ಎಷ್ಟು ವರ್ಷಾ ಆತು ನಿನ್ನಾ ನೋಡಿ, ಆವಾಗ ಹೆಂಗ್ ಇದ್ದ್ಯೋ, ಈಗೂ ಹಂಗ ಅದಿ ಅಲ್ಲಲೇ. ಒಂಚೂರೂ ಕಮ್ಮಿ ಆಗೇಲ ನೋಡ್ ನೀ. ಅವಾಗು ಇವಾಗೂ ಡುಮ್ಮಾನೇ."
ನನ್ನ ಕಪ್ಪು ಮುಖ ಅರೆ ಕ್ಷಣ ಕೆಂಪೇರಿದ್ದು ನಿಜಾ, ಇವನು ಒಂದು ದಿನವಾದರೂ ನಮ್ಮ ಮನೆಗೆ ದಿನಸಿ ಹಾಕಿದ್ದಾನೆಯೇ, ಹೋಗಲಿ ಒಂದು ಹೊತ್ತಿನ ಊಟ ಉಣಬಡಿಸಿದ್ದಾನ ? ಇವನಾರು ನನ್ನ ವಿಕಾರದ ಬಗ್ಗೆ ಇಷ್ಟು ಕಠೋರ ಸತ್ಯಗಳನ್ನ ಹೀಗೆ ಎಲ್ಲರ ಮುಂದೆ ನನಗೆ ಮುಜುಗುರವಾಗುವಂತೆ ಹೇಳುವುದಕ್ಕೆ. ಇವನ ಪರಿಚಯವಾದರೂ ಏನು?
ನನ್ನ ಕಣ್ಣ ಹುಬ್ಬಿನಲ್ಲಿ ಮೂಡಿದ ಪ್ರಶ್ನಾರ್ಥಕ ಚಿಹ್ನೆ ಗಮನಿಸಿದ ಆತ, "ಟಬ್ಬ, ನಾನಲೇ ಸಂಜು, ಸಂಜಯ್".
ನನಗೆ ಒಂದು ಕ್ಷಣ ಹಿಡಿಯಿತು ಮೆದುಳಿನ ಯಾವುದೋ ಮೂಲೆಯಲ್ಲಿ ಧೂಳಿಟ್ಟಿದ ಆ ನೆನಪನ್ನ ಹುಡುಕಿ ತೆಗೆಯಲು. "ಜಿಮ್ಮಿ ಸಂಜು ನಾ, ಏನೋ ಇಷ್ಟೊಂದು ಬದಲಾಗಿದ್ದಿಯ, ಜಿಮ್ ನಿಲ್ಲಿಸಿಬಿಟ್ಟೆಯ"
"ಜಿಮ್ ನಿಲ್ಲಿಸಿ ಯಾವ ಜಮಾನಾ ಆಯ್ತು ಟಬ್ಬ, ಈಗ ಅದೇ ಗೆಳೆಯರು bar ಅಲ್ಲಿ ಸೇರ್ತೀವಿ. ಒಂದು ವ್ಯಯಸ್ಸಾದ ಮೇಲೆ gym ಎಲ್ಲಾ ಯಾಕೆ, beer brandy ನೇ ಓಕೆ ಅನ್ಸುತ್ತೆ ಕಣೋ. ಈ ಸಂಜೆ ಫ್ರೀ ಇದ್ರೆ ರಾಜಭವನ bar and restaurant ಗೆ ಬಾ, ನಾವಲ್ಲಿ ಖಾಯಂ ಗಿರಾಕಿಗಳು ಕಳೆದ 10 ವರ್ಷದಿಂದ. ಸಿಗುವಾ." ಎಂದು ಹೇಳಿ ಹೊರಟು ಹೋದ, ನನ್ನ ಮನಸ್ಸಿನಲ್ಲಿ ಸಣ್ಣದೊಂದು ಖಾಲಿಜಾಗ ಬಿಟ್ಟು.
ಸಂಜಯ, ಎಂಥಾ ಸ್ಪುರದ್ರೂಪಿಯಾಗಿದ್ದ ಗೊತ್ತೇ?! ಉದ್ದನೆಯ ಮೂಗು, ಅಗಲವಾದ ಹೆಗಲು, ಎದೆಯಷ್ಟೇ ಹೊಟ್ಟೆ, ಮೂಲಂಗಿ ಕಾಲುಗಳು. Personality ದೇವರು ತೂಗಿ ಹಾಕಿ ಹೊಲೆದು ಕಳಸಿದ್ದಾನೇನೋ ಎಂಬಷ್ಟು. ಸಂಜಯನಿಗೆ "ಜಿಮ್ ಸಂಜು" ಅಂತಲೇ ಅಡ್ಡ ಹೆಸರು. ಸಂಜೆ 6 ಘಂಟೆಗೆ ಸರಿಯಾಗಿ ಸಂಜಯನನ್ನು ನಾವು ಬೇರೆಲ್ಲೂ ಹುಡುಕುವ ಅಗತ್ಯವೇ ಇರಲಿಲ್ಲ. ಅಷ್ಟು ಶಿಸ್ತಾಗಿ ಜಿಮ್ ಅಲ್ಲಿ ತಾಲೀಮು ಮಾಡಿ ಅವನ ಆಹಾರ ತಜ್ಞರು ಸೂಚಿಸಿದಂತೆ ಆಹಾರ ಸೇವಿಸಿ ರಾತ್ರಿ10 ಗಂಟೆಯೊಳಗೆ ಮಲಾಗಿದರಾಯಿತು.
ಅಂಥ ಸಂಜಯ ಈಗ gym ಕಡೆ ಹೊಳ್ಳಿಯೂ ಕೂಡ ನೋಡುತ್ತಿಲ್ಲ, ಅವನ ಆಹಾರಪದ್ದತಿ ಅದೋಗತಿಗೆ ಇಳಿದಾಗಿದೆ. Bar, beer ಅವನನ್ನು ವ್ಯಸನಿಯನ್ನಾಗಿ ಮಾಡಿ ಬಿಟ್ಟಿವೆ.
ಸಹವಾಸ ದೋಷ, ಮಾಗುತ್ತಿರುವ ವಯಸ್ಸು, ಇರುವುದೊಂದೇ ಜೀವನ- ಎಲ್ಲವನ್ನೂ ರುಚಿಸಿ ರಂಜಿಸಿ ಸವಿದರಾಯಿತು. ನೀವೇನೇ ಸಬೂಬು ಕೊಟ್ಟು ಸಮಾಜಾಯಿಸಬಹುದು. ಆದರೆ ನೀವು ಗಮನಿಸಲೇಬೇಕಾದ ವಿಷಯವೆಂದರೆ ನಿಮ್ಮೊಳಗಿರುವ ಶೈತಾನ ಇವೆಲ್ಲವನ್ನೂ ನಿಮ್ಮ ಜೀವನದಲ್ಲಿ ನಿಮ್ಮ ಕಣ್ಣಂಚಿಗೂ ಸುಳಯದಂತೆ ತಂದು ಕೂರಿಸಿ ಬಿಟ್ಟಿರುತ್ತಾನೆ.
ದಿನನಿತ್ಯವೂ ನಸುಕಿನ ಮುಂಜಾನೆಯಲ್ಲಿ ಎದ್ದು ವಾಯುವಿಹಾರಕ್ಕೆ ಹೋಗುವ ನಿಮಗೆ, "ದಿನಾಲೂ ಹೊಕ್ಕಿ, ಚಳಿ ಬಾಳ ಅದ, ಇವತ್ತೊಂದು ದಿನ ಮಕ್ಕೊಂಡ್ರ ಲೂಕ್ಷಾನು ಏನೂ ಇಲ್ಲಾ".
ದಿನವೂ ಮೂರೇ ಮೂರು ಇಡ್ಲಿ ತಿನ್ನುವ ನಿಮಗೆ " ಚಟ್ನಿ ತುಂಬಾ ಚೆನ್ನಾಗಿದೆ, ಇಡ್ಲಿ ಮಲ್ಲಿಗೆಗಿಂತ ಹಗುರ. ಇನ್ನೊಂದೆರಡು ಇಡ್ಲಿ ತಿಂದ್ರೆ ತೂಕ ಏನೂ ಹೆಚ್ಚಾಗಲ್ಲ."
ಕೆಲವು ಹಲವಾರು ಹೊತ್ತಿಗೆಗಳನ್ನು ಓದಿದ ನಂತರ "ನೀನೆಷ್ಟು ಬುದ್ಧಿವಂತ ಮಾರಾಯ, ಎಷ್ಟು ಪುಸ್ತಕಗಳನ್ನ ಅರೆದು ಕುಡಿದು ಬಿಟ್ಟಿದ್ದಿಯ, ನಿನ್ನ ಹಾಗೆ ಎಷ್ಟು ಜನರಿದ್ದಾರೆ ಹೇಳು ನೋಡುವಾ".
"ಅರೆರೆ, ಒಬ್ಬ ಹುಡುಗಿಯಾಗಿ ಇಷ್ಟೊಂದು ಸೇವೆಯಾ, ಎಷ್ಟೊಂದು ಹುಡುಗರಿಗೆ ಎಷ್ಟು ಸ್ಕೂಲ್ ಕಿಟ್ ಗಳು, ಎಷ್ಟು ಹೊದಿಕೆಗಳು ದಾನ ಮಾಡಿದ್ದೀಯಾ ನಿರಾಶ್ರಿತರಿಗೆ."
"ಎರೆಡು ತಿಂಗಳು ಸಿಗರೇಟ್ ಕಡೆ ಹೊಳ್ಳಿಯು ನೋಡಿಲ್ಲ, ಮನಸ್ಸಿನ ಮೇಲೆ ಎಷ್ಟು ನಿಯಂತ್ರಣ, ತುಂಬಾ ಹೆಮ್ಮೆ ಪಡುವ ವಿಷಯ. ಮಳೆ ಬಿದ್ದಿದೆ, ಒಂದು ಬತ್ತಿ ಹೊಡೆದರೆ ಏನಾದೀತು, ನೀನು ಬೇಡಾ ಅಂದಾಗ ನಿಲ್ಲಿಸಿದರಾಯಿತು".
"ಅರೇರೇರೇ, ಎಲ್ಲಾ ದಾಂಡಿಗರು ನೆಲಕ್ಕೆ ಬಿದ್ದು ಮೀಸೆ ಮಣ್ಣಾಗುತ್ತಿದ್ದರೂ ನೀನೊಬ್ಬನೇ ಅವಡುಗಚ್ಚಿ ನಿಂತು ನಿನ್ನ ತಂಡವನ್ನು ಗೆಲ್ಲಿಸಿದೆ, ಭಲೇ, ಶಭಾಷ್. ನಿನ್ನ ಸರಿಸಾಟಿ ಯಾರಿನ್ನು. ನಿನಗೇಕೆ ಬೇಕಿನ್ನು ತಾಲೀಮು, ಮೀನಿಗೆ ಈಜು ಹೇಳಿ ಕೊಡಬೇಕೇ "
"ಲೋಕವೇ ಅರ್ಧ ರಾತ್ರಿಯ ನಿದ್ದೆಯನ್ನು ಆನಂದಿಸುವಾಗ ನೀನು ಮಾತ್ರ ಕಣ್ಣು ರೆಪ್ಪೆಗೆ ಖಡಕ್ಕಾಗಿ ಎಚ್ಚರಿಕೆಯನ್ನಿತ್ತು ಗಣಕ ಯಂತ್ರದ ಮುಂದೆ ಕೂತು ಕೆಲಸ ಮಾಡುತ್ತಿರುವೆಯಲ್ಲಾ, ಏನು ಹೇಳಿ ಹಾಡಿ ಹೊಗಳಲಿ . ಇನ್ನು ನಾಲ್ಕು ತಿಂಗಳು ಕೆಲಸ ಮಾಡಿದ್ದರೂ ಆಯಿತು, ಅಷ್ಟೂ ನೀನು ಇದೊಂದೇ ವಾರದಲ್ಲಿ ಮುಗಿಸಿದ್ದಿಯ"
ಹೀಗೆಯೇ ನಿಮ್ಮ ಕಿವಿಯಲ್ಲಿ ಪಿಸುಗುಟ್ಟಿ ನಿಮ್ಮ ನಿರಂತರತೆಯ ಹಾದಿ ತಪ್ಪಿಸುವ ಆತ ನಿಮ್ಮೊಳಗೇ ಇದ್ದಾನೆ, ಹುಷಾರು.
ಶ್ರೀಅಪ್ಪಿ