ಶ್ರೀ ಮತ್ತೇ ಅಪ್ಪಿಯರದ್ದು ಸರಿ ಸುಮಾರು ೩೦_೩೫ ವರ್ಷಗಳ ಹಳೆಯ ಸಂಬಂಧ. ಪುಟಗೋಸಿ ಗೆಳಯರಲ್ಲದೆ ಹೋದರೂ ಗಳಸ್ಯ ಕಂಠಸ್ಯ ಸ್ನೇಹಿತರು. ಬೆಳೆದಿದ್ದು ಬೇರೆ ಬೇರೆ ಪರಿಸರವಾದರೂ ಇಬ್ಬರ ಪ್ರಕೃತಿ ಪ್ರವೃತ್ತಿ ಹವ್ಯಾಸಗಳು ತೀರಾ ಹಾಸು ಹೊಕ್ಕುವಂತಹವೇ. ಬೆಳಿಗ್ಗೆ 9 ಹೊಡೆದರೆ ಸಾಕು, ಅಪ್ಪಿ ಎಂತಹ ಕೆಲಸವಿದ್ದರೂ ಬಿಟ್ಟು ಶ್ರೀ ಮನೆಯ ಬಾಗಿಲಿಗೆ ಹಾಜರು. ರಜೆಯ ಮರುದಿನ ದಿನಪತ್ರಿಕೆ ಬರೋದು ತಪ್ಪಿತೋ ಏನೋ, ಇವರ ಹಾಜರಿ ತಪ್ಪಿದ್ದೇ ಇಲ್ಲ. ಅಪ್ಪಿಗೆ ಶ್ರೀ ಮನೆಯಲ್ಲಿ ಮಾಡೋ ಇಡ್ಲಿ, ತೆಂಗಿನ ಕಾಯಿ ಚಟ್ನಿ ಅಂದರೆ ಪಂಚ ಪ್ರಾಣ. ಅದು ಶ್ರೀ ಮನೆಯ ಎಲ್ಲರಿಗೂ ಗೊತ್ತು ಹಾಗೆಯೇ ಅವರೆಲ್ಲರಿಗೂ ಅಪ್ಪಿ ಮನೆಗೆ ಬಂದರೆಂದರೆ ಬಡಿಸಿ ಅವರ ಮಾತು ಕೇಳುತ್ತಾ ತಿಂಡಿ ತಿನ್ನುವ ಖುಷಿ. ಅಪ್ಪಿ ಗೇಟು ತೆಗೆದು ಮನೆ ಹೊಸ್ತಿಲು ದಾಟಿ ಪಡಸಾಲೆಗೆ ಬಂದರೆ ಶ್ರೀ ಅವನ ಆ ದಿನದ ಮೆಚ್ಚಿನ ಅಂಕಣ ಮುಗಿಸಿ 9 ಘಂಟೆಗೆ ಇವರ ಬರುವಿಕೆಗೆ ಕಾಯುತ್ತಾ ಕೂತಿರುತ್ತಾನೆ. ಅಪ್ಪಿ ಬಂದ ತಕ್ಷಣ, "ಲೇಯ್ , ಇವತ್ತೇನು?"
"ಇಡ್ಲಿ, ತೆಂಗಿನಕಾಯಿ ಚಟ್ನಿ "
" ಡಬರಿ ಚಿತ್ರಾನ್ನ, double ommlette"
" ತಂಗಳನ್ನದ ಪುಳಿಯೋಗರೆ, ಒಂದು ಹಿಡಿ ಮೊಸರು ಮೆಣಸಿನಕಾಯಿ"
" ಪುಲಾವು, ಪಚ್ಚಡಿ "
" ಟೊಮಾಟೋ ಬಾತ್, ಮೆಣಸಿನಕಾಯಿ ಬಜ್ಜಿ ".
ದಿನಕ್ಕೊಂದು ಅಡುಗೆ, ನಂಚಿಕೊಳ್ಳಲು ಏನೋ ಒಂದು ಬೇಕೇ ಬೇಕು, ಇಬ್ಬರಿಗೂ. ಮೊಸರನ್ನಕ್ಕೆ ನಿಂಬೆ ಹಣ್ಣಿನ ಉಪ್ಪಿನಕಾಯಿಯೇ ಬೇಕು. ಬಿರಿಯಾನಿ ಮಾಡಿದರಂತೂ, ಅಪ್ಪಿ ಬರೀ ಅನ್ನವನ್ನೇ ತಿನ್ನುವ ಗಿರಾಕಿ ಆದರೆ ಅದರ ಜೊತೆ ಬದನೆಕಾಯಿ ಚಾಲನಾ ಇದ್ದರೆ ಅವರ ನಗು ಯಾವ ದಾಸವಾಳದ ಅಗಲಕ್ಕೂ ಸಮನಿಲ್ಲ ಬಿಡಿ.
ಅದೇನೋ ನoಟೋ, ಶ್ರೀ ಮತ್ತೇ ಅಪ್ಪಿಯದ್ದು, ಬೆಳಿಗ್ಗೆ ತಿಂಡಿ ತಿಂದು ಹೊರಟರೆಂದರೆ ಸಾಯಂಕಾಲ ಆರು ಘಂಟೆಗೆ ಕಾಫಿಗೆ ಹಾಜರು. ಕಾಫಿ ಅಂದರೆ ಶ್ರೀ ಮನೆಯ ಕಾಫಿ, ನಗು ಮುಖದೊಂದಿಗೆ ಮನೆ ಯಜಮಾನಿ ಕೊಟ್ಟರೆ ಅಪ್ಪಿಗೆ ಅದೇ ಅಮೃತ. ಕಾಫಿ ಆದಮೇಲೆ ಒಂದು ಒಂದು ವರೆ ತಾಸು ಹರಟೆ ಹೊಡೆಯುತ್ತಾರೆ ಇಬ್ಬರೂ, ಮನೆಯ ಅಂಗಣದ ಕಟ್ಟೆಯ ಮೇಲೆ ಕೂತು. ಇಷ್ಟು ವರ್ಷಗಳ ಕಾಳ, ದಿನವೂ ಅದೇನು ಮಾತಾಡುತ್ತಾರೋ , ಹಾದಿ ಹೋಗಕರೆಲ್ಲ ತಿರುಗಿ ನೋಡುವಷ್ಟು ಕೆಕ್ಕರಿಸಿ ನಗು ಬೇರೆ ಆವಾಗಾವಾಗ. ಯಾವುದೋ ಬೀದಿಯ ರಸ್ತೆ ಹಿಡಿದು ರಹದಾರಿ ಹೊಕ್ಕು ರಾಜಮಾರ್ಗದಲ್ಲಿ ತೇರು ತೇಲಿಸಿ ಸಮುದ್ರಗಳನ್ನು ದಾಟಿ ಸುರಂಗ ಮಾರ್ಗ ಹೊಕ್ಕು ಪುಷ್ಪಕ ವಿಮಾನವೇರಿ ಎಲ್ಲೆಲ್ಲಿಯೋ ಹೊಗುತ್ತದೆ ಇವರ ವಿಚಾರ ಧಾರೆಗಳು.ಒಂದೊಂದು ಸಲವಂತೂ ವಿಚಾರ ವಿನಿಮಯ ವಾದವಾಗಿ, ವಾದ ಜಗಳವಾಗಿ, ಕೈ ಕೈ ಮೀಸಲಾಯಿಷ್ಟರ ಮಟ್ಟಿಗೆ ಹೋಗಿದ್ದು ಉಂಟು. ನಾಳೆಯಿಂದ ಅಪ್ಪಿ, ಶ್ರೀ ಮನೆಗೆ ಬರುವುದಿಲ್ಲವೇನೋ ಅನ್ನುವಷ್ಟು.
ಮರುದಿನ ೯ ಘಂಟೆಗೆ "ಲೇಯ್ , ಇವತ್ತೇನು?".

No comments:
Post a Comment