Monday, October 27, 2025

ಶ್ರೀ - ಅಪ್ಪಿ ಕಥಾ ಪ್ರಸಂಗ ೧

 ಶ್ರೀ ಮತ್ತೇ ಅಪ್ಪಿಯರದ್ದು ಸರಿ ಸುಮಾರು ೩೦_೩೫ ವರ್ಷಗಳ ಹಳೆಯ ಸಂಬಂಧ. ಪುಟಗೋಸಿ ಗೆಳಯರಲ್ಲದೆ ಹೋದರೂ ಗಳಸ್ಯ ಕಂಠಸ್ಯ ಸ್ನೇಹಿತರು. ಬೆಳೆದಿದ್ದು ಬೇರೆ ಬೇರೆ ಪರಿಸರವಾದರೂ ಇಬ್ಬರ ಪ್ರಕೃತಿ, ಪ್ರವೃತ್ತಿ, ಹವ್ಯಾಸಗಳು ತೀರಾ ಹಾಸು ಹೊಕ್ಕುವಂತಹವೇ. ಬೆಳಿಗ್ಗೆ 9 ಹೊಡೆದರೆ ಸಾಕು, ಅಪ್ಪಿ ಎಂತಹ ಕೆಲಸವಿದ್ದರೂ ಬಿಟ್ಟು ಶ್ರೀ ಮನೆಯ ಬಾಗಿಲಿಗೆ ಹಾಜರು. ರಜೆಯ ಮರುದಿನ ದಿನಪತ್ರಿಕೆ ಬರೋದು ತಪ್ಪಿತೋ ಏನೋ, ಇವರ ಹಾಜರಿ ತಪ್ಪಿದ್ದೇ ಇಲ್ಲ. ಅಪ್ಪಿಗೆ ಶ್ರೀ ಮನೆಯಲ್ಲಿ ಮಾಡೋ ಇಡ್ಲಿ, ತೆಂಗಿನ ಕಾಯಿ ಚಟ್ನಿ ಅಂದರೆ ಪಂಚ ಪ್ರಾಣ. ಅದು ಶ್ರೀ ಮನೆಯ ಎಲ್ಲರಿಗೂ ಗೊತ್ತು ಹಾಗೆಯೇ ಅವರೆಲ್ಲರಿಗೂ ಅಪ್ಪಿ ಮನೆಗೆ ಬಂದರೆಂದರೆ ಬಡಿಸಿ ಅವರ ಮಾತು ಕೇಳುತ್ತಾ ತಿಂಡಿ ತಿನ್ನುವ ಖುಷಿ. ಅಪ್ಪಿ ಗೇಟು ತೆಗೆದು ಮನೆ ಹೊಸ್ತಿಲು ದಾಟಿ ಪಡಸಾಲೆಗೆ ಬಂದರೆ ಶ್ರೀ ಅವನ ಆ ದಿನದ ಮೆಚ್ಚಿನ ಅಂಕಣ ಮುಗಿಸಿ 9 ಘಂಟೆಗೆ ಇವರ ಬರುವಿಕೆಗೆ ಕಾಯುತ್ತಾ ಕೂತಿರುತ್ತಾನೆ. ಅಪ್ಪಿ ಬಂದ ತಕ್ಷಣ, "ಲೇಯ್ , ಇವತ್ತೇನು?"

"ಇಡ್ಲಿ, ತೆಂಗಿನಕಾಯಿ ಚಟ್ನಿ "

" ಒಂದು ಡಬರಿ  ಚಿತ್ರಾನ್ನ, double ommlette"

" ತಂಗಳನ್ನದ ಪುಳಿಯೋಗರೆ, ಒಂದು ಹಿಡಿ ಮೊಸರು ಮೆಣಸಿನಕಾಯಿ"

" ಪುಲಾವು, ಪಚ್ಚಡಿ "

" ಟೊಮಾಟೋ ಬಾತ್, ಮೆಣಸಿನಕಾಯಿ ಬಜ್ಜಿ ".

ದಿನಕ್ಕೊಂದು ಅಡುಗೆ, ನಂಚಿಕೊಳ್ಳಲು ಏನೋ ಒಂದು ಬೇಕೇ ಬೇಕು, ಇಬ್ಬರಿಗೂ. ಮೊಸರನ್ನಕ್ಕೆ ನಿಂಬೆ ಹಣ್ಣಿನ ಉಪ್ಪಿನಕಾಯಿಯೇ ಬೇಕು. ಬಿರಿಯಾನಿ ಮಾಡಿದರಂತೂ, ಅಪ್ಪಿ ಬರೀ ಅನ್ನವನ್ನೇ ತಿನ್ನುವ ಗಿರಾಕಿ ಆದರೆ ಅದರ ಜೊತೆ ಬದನೆಕಾಯಿ ಚಾಲನಾ ಇದ್ದರೆ ಅವರ ನಗು ಯಾವ ದಾಸವಾಳದ ಅಗಲಕ್ಕೂ ಸಮನಿಲ್ಲ ಬಿಡಿ. 

ಅದೇನು ನoಟೋ, ಶ್ರೀ ಮತ್ತೇ ಅಪ್ಪಿಯದ್ದು, ಬೆಳಿಗ್ಗೆ ತಿಂಡಿ ತಿಂದು ಹೊರಟರೆಂದರೆ ಸಾಯಂಕಾಲ ಆರು ಘಂಟೆಗೆ ಕಾಫಿಗೆ ಹಾಜರು. ಕಾಫಿ ಅಂದರೆ ಶ್ರೀ ಮನೆಯ ಕಾಫಿ, ನಗು ಮುಖದೊಂದಿಗೆ ಮನೆ ಯಜಮಾನಿ ಶಾರದಮ್ಮ ಕಾಫಿ ಕೊಟ್ಟರೆ ಅಪ್ಪಿಗೆ ಅದೇ ಅಮೃತ. ಕಾಫಿ ಆದಮೇಲೆ ಒಂದು - ಒಂದುವರೆ ತಾಸು ಹರಟೆ ಹೊಡೆಯುತ್ತಾರೆ ಇಬ್ಬರೂ, ಮನೆಯ ಅಂಗಣದ ಕಟ್ಟೆಯ ಮೇಲೆ ಕೂತು. ಇಷ್ಟು ವರ್ಷಗಳ ಕಾಳ, ದಿನವೂ ಅದೇನು ಮಾತಾಡುತ್ತಾರೋ . ಹಾದಿ ಹೋಗುಕರೆಲ್ಲ ತಿರುಗಿ ನೋಡುವಷ್ಟು ಕೆಕ್ಕರಿಸಿ ನಗು ಬೇರೆ ಆವಾಗಾವಾಗ. ಯಾವುದೋ ಬೀದಿಯ ರಸ್ತೆ ಹಿಡಿದು ರಹದಾರಿ ಹೊಕ್ಕು ರಾಜಮಾರ್ಗದಲ್ಲಿ ತೇರು ತೇಲಿಸಿ ಸಮುದ್ರಗಳನ್ನು ದಾಟಿ ಸುರಂಗ ಮಾರ್ಗ ಹೊಕ್ಕು ಪುಷ್ಪಕ ವಿಮಾನವೇರಿ ಎಲ್ಲೆಲ್ಲಿಯೋ ಹೊಗುತ್ತದೆ ಇವರ ವಿಚಾರ ಧಾರೆಗಳು.ಒಂದೊಂದು ಸಲವಂತೂ ವಿಚಾರ ವಿನಿಮಯ ವಾದವಾಗಿ, ವಾದ ಜಗಳವಾಗಿ, ಕೈ ಕೈ ಮಿಲಾಯಿಸುವಷ್ಟರ ಮಟ್ಟಿಗೆ ಹೋಗಿದ್ದು ಉಂಟು. ನಾಳೆಯಿಂದ ಅಪ್ಪಿ, ಶ್ರೀ ಮನೆಗೆ ಬರುವುದಿಲ್ಲವೇನೋ ಅನ್ನುವಷ್ಟು. 

ಮರುದಿನ ೯ ಘಂಟೆಗೆ "ಲೇಯ್ , ಇವತ್ತೇನು?".


ಆವತ್ತು ಕಾರ್ತಿಕ ಸೋಮಾರ  ಇರ್ಬಕು , ಎಂದಿನಂತೆ ಅಪ್ಪಿ ೯ ಘಂಟೆಗೆ ಹಾಜರು. ಶುಭ್ರವಾಗಿ ಶ್ಯಾವಿಗಿ ಉಪ್ಪಿಟ್ಟು, ಖಾರದ ಚಟ್ನಿ ಮಾಡಿ ಟೇಬಲ್ ಮೇಲಿಟ್ಟಿದ್ದರು ಶಾರದಮ್ಮ. ಕಾರ್ತಿಕ ಮಾಸದಲ್ಲಿ ಶಾರದಮ್ಮನವರಿಗೆ ಅವರೆಕಾಳು ಹೆಂಗ್ ಸಿಗ್ತಾವೋ ಆ ಶಿವಂಗ ಗೊತ್ತು. ಅವರೆಕಾಳು ಹಾಕಿ ಶ್ಯಾವಿಗಿ ಉಪ್ಪಿಟ್ಟು ಮಾಡ್ತಾರ ಶಾರದಮ್ಮನೋರು, ಒಂದು ಸಲಾ ತಿನ್ನಬೇಕು ನೀವು. ಶ್ರೀ ಮತ್ತ ಅಪ್ಪಿ ತಿನ್ನಲಿಕ್ಕೆ ಶುರು ಮಾಡಿದ್ರು, ಅಪ್ಪಿಗೆ ಅಲ್ಲೇ ಓರಣವಾಗಿ ಜೋಡಿಸಿಟ್ಟ ೨ ಬೆಳ್ಳಿ ತಟ್ಟಿ ಕಂಡವು.

"ಹೊಸಾವ ಇವು, ಯಾವಾಗ ತಂದ್ರಿ" ಅಪ್ಪಿ ಕೇಳಿದ.

"ಇಲ್ಲಲೇ, ಹಳೆವು. ಬಾಗಿಲು ಮುಂದ ರಾತ್ರಿ ಯಾರೋ ಬಿಟ್ಟು ಹೋಗಿದ್ರು, ಗಬಕ್ಕನ ಹೋಗಿ ಆಯ್ಕೊಂಡ್ ಬಂದೆ, ಯಾರಿಗೂ ಹೇಳ್ಬೇಡಾ ಮತ್ತ".

"ಒಟ್ಟ, ಒಚ್ಚಿ ಒಗಿಯೋದ ನೋಡ್ ನೀ, ಖರೆ ಹೇಳಲೇ".

" ಕಾರ್ತಿಕ ಸೋಮಾರ, ಇಕಿ ಯಾರೋ ಸ್ವಾಮೆರನ್ನ ಕರದಾಳ ಸಂಜಿ ಬಿನ್ನಕ್ಕ, ಹಂಗಾಗಿ special silver plates ಪಾ".

"ಜೋರಾತಪ, ಒಳ್ಳೆದು. ನಡೀಲಿ, ನಡೀಲಿ".

"ಅಪ್ಪಿ, ನೀನು ಬಂದು ಬಿಡು. ನೀನಿಲ್ದ ಕೈಕಾಲ ಆಡಂಗಿಲ್ಲಾ  ನಂಗ".

" ನೀ ಕರಿ, ಬಿಡು, ನಾ ಬರವ್ನ, ಸ್ವಾಮೇರ್ನ ಕಂಡು ಕಾಲು ಮುಗಿದು ಆಶೀರ್ವಾದ ತೊಗೊಂಡು ಥರಾವರಿ ಅಡುಗಿ ಖಾಲಿ ಮಾಡೇ ಹೋಗೋವ್ನ" ಅಪ್ಪಿ ಮಾತಿಗೆ ಶ್ರೀ ಮತ್ತೆ ಮನೆವರೆಲ್ಲ ನಗುವಿನ ಪಾಲಾದರು.

ಸಂಜೆ ಆತು, ಸ್ವಾಮೇರು ಬಂದ್ರು, ಪೂಜೆ ಸಾಂಘವಾಗಿ ಪೂರ್ತಿ ಆತು. ಊಟಕ್ಕಂತ ಕುಂತ್ರು. ಸ್ವಾಮೇರು, ಶ್ರೀ ಗೆ ಬೆಳ್ಳಿ ತಟ್ಟಿ ಇಟ್ಟರು ಶಾರದಮ್ಮ, ಅಪ್ಪಿಗೂ, ಮಗನಾದ ಗಿರಿಗೂ ಬಾಳೆ ಎಲೆನೂ ಇಟ್ಟರು. ಅಪ್ಪಿ phone ರಿಂಗಣಿಸಿತು. Phone ಮಾತಾಡಿದ ಅಪ್ಪಿ ಎದ್ದು ನಿಂತ. 

ಶ್ರೀ ಗಾಬರಿಯಿಂದ "ಯಾಕ, ಏನಾತು " ಅಂತ ಕೇಳಿದ.

"ಇಲ್ಲ; ನಮ್ಮ ಮುಸ್ತಫಾ ಮನೆಯವರಿಗೆ ಆರೋಗ್ಯದ ಏರುಪೇರು ಅಂತ, ಕಾರು ತೊಗೊಂಡು ಲಗೂನ ಬರ್ರಿ  ಅಂದ್ರು, ಬಹುಶಃ ಉಡುಪಿ ಇಲ್ಲಾಂದ್ರ ಮಣಿಪಾಲ್ ಗೆ ಹೋಗೋದು ಆಗಬಹುದು, ನೀವು ಮುಂದುವರಿಸರಿ. ಶ್ರೀ, ನಾ ಅಲ್ಲಿಗೆನರ ಹೋದ್ರ ಮೂರು ನಾಕು ದಿನಾ ಆದೀತು, ಊರಿಗೆ ಬಂದು ತಕ್ಷಣ ಇಲ್ಲಿಗೆ ಬರ್ತೀನಿ".


ಇವತ್ತಿಗೆ ಸರಿಯಾಗಿ ಒಂದೂವರೆ ವಾರ ಆಯ್ತು ಅಪ್ಪಿ ಹೋಗಿ, ನಿನ್ನೆ ಶ್ರೀ ಗೆ ಕಾಲ್ ಮಾಡಿ ಹೇಳಿದ್ದ, 

"ಎಲ್ಲಾ ಸರಿ ಹೋಗೇತಿ, ಬಾಭಿಜಾನ್ discharge ಆದ್ರ, ರಾತ್ರಿ ಹೊಂಟು ಬೆಳಿಗ್ಗೆ ಅಷ್ಟೊತ್ತಿಗೆ ಬರ್ತೀವಿ".

"ಶಾರದಾ, ನಾಳೆ ಅಪ್ಪಿ ಬರ್ತಾನ, ಇಡ್ಲಿ ಮಾಡ್ಲಿಕ್ಕಾಗ್ತದ?".  ಕೂಗಿ ಕೇಳಿದ್ದ ಶ್ರೀ.

"ಹೂಂ, ಮಾಡಿದ್ರಾತು. ಈಗರ ಚೂರು ನಗರಿಪಾ, ಹ್ಯಾಪ ಮಾರಿ ಹಾಕೊಂಡು ಮೂಲ್ಯಾಗ ಕುಂತೀರಿ ಒಂದು ವಾರದಿಂದ. ನೋಡ್ಲಿಕ್ಕಾಗವಲ್ಡು ನಿಮ್ಮನ್ನ". 

ಶ್ರೀ ಬೆಳಿಗ್ಗೆ ಎದ್ದು ಸ್ನಾನ ಮಾಡಿದವನೇ , ಪೇಪರ್ ಕೂಡಾ ಓದಲಿಲ್ಲ, ೮ ಘಂಟೆಗೆ ಗೇಟ್ ಹತ್ರ ಕಾಯ್ಕೊಂತ ಆಕಡೆಯಿಂದ ಈಕಡೆ, ಈಕಡೆಯಿಂದ ಆಕಡೆ, ಓಡಾಟ. 

ಗಡಿಯಾರ ಒಂಬತ್ತು ಘಂಟೆ ತೋರಿಸಿತ್ತು,

 "ಲೇಯ್ , ಇವತ್ತೇನು?". ಅಪ್ಪಿ ಗೇಟ್ ಹತ್ರ ಕೇಳಿದ್ದ. ಶ್ರೀ ಅವನನ್ನ ನೋಡಿದ್ದೇ, ಓಡಿಹೋಗಿ ಗಟ್ಟಿಯಾಗಿ ತಬ್ಬಿಕೊಂಡ. ಅಪ್ಪಿಗೆ ಆಶ್ವರ್ಯ ಆಗಿ "ಏನಾತಲೇ", ಅಂತ ಕೇಳಿದ. ದರದರನೆ ಎಳೆದುಕೊಂಡು ಒಳಗೆ ಕರೆದೊಯ್ದ ಶ್ರೀ.

Dining table ಅಲ್ಲಿ ಎರೆಡು ಬೆಳ್ಳಿ ತಟ್ಟೆಯಲ್ಲಿ, ಬಿಸಿ ಬಿಸಿ ಇಡ್ಲಿ ಇನ್ನೂ ಹೊಗೆಯಾಡತಿದ್ದವು, ಗಟ್ಟಿಚಟ್ನಿಗೆ ಒಗ್ಗರಣೆ ಹಾಕಿ ಮಟ್ಟಸವಾಗಿ ಬಡಿಸಿಟ್ಟಿದ್ರು ಶಾರದಮ್ಮ. 

"ಅಬಾಬಬ್ಬಾ, ಇವತ್ತು ಯಾರ ಸ್ವಾಮೇರು ಬರ್ತಾರಪ್ಪ, special silver plate ಹೊರಾಗ ಬಂದಾವು " ಅಪ್ಪಿ ಕೇಳಿದ.

ಶ್ರೀ ಕಣ್ಣು ತೇವ ಆಗಿದ್ವು, ಗಂಟಲು ಒಣಗಿತ್ತು, " ದೋಸ್ತ, ಯಾರೋ ಸ್ವಾಮೇರ ಬರ್ತಾರಂಧ್ರ ವಿಶೇಷ ಅಂದುಕೊಂಡಿದ್ದೆ, ಈ ಒಂದು ವಾರದೊಳಾಗ ನನಗನಿಸಿದ್ದು, ಎಲ್ಲಾರಗಿಂತಾ ವಿಶೇಷ ನೀನಲೆ.ದಿನಾ ಬರೋ ನೀನು ಒಂದೇ ಒಂದು ದಿನಾ ಬರ್ಲಿಲ್ಲ ಅಂದ್ರ ಮನಸ್ಸು ತತ್ತರಿಸಿ ಹೋತು, ನಿನ್ನಂಥ ದೋಸ್ತ ಒಬ್ಬವಾ ಇದ್ರ ಅವನ ಎಲ್ಲಾರಿಗಿಂತ ವಿಶೇಷ" .


########     ಶುಭಂ      ##########

ಇಂತಿ ನಿಮ್ಮ ಪ್ರೀತಿಯ, 

ಶ್ರೀಅಪ್ಪಿ.



Friday, March 14, 2025

ನನ್ನ ಬಾಲ್ಯದ ಬಣ್ಣದ ಆಟ

 ಅಪರೂಪಕ್ಕೆ ಮುಂಜಾನೆ ಬೇಗ ಎಚ್ಚರ ಆತು, ಅರ್ಧ ತಾಸು ಮಂಚದಾಗ ಹೊರಳಾಡಿ ಬೇಜಾರಾಗಿ, ವಾಯು ಸಂಚಾರಕ್ಕಂತ(walk) ಹೊರಟೆ. ಗೊತ್ತಲ್ಲ ನಿಮಗ, ಮುಂಜ್ ಮುಂಜಾನೆ apartment ಒಳಗ school buses ಸಾಲಗ ನಿಂತು ಬಿಟ್ಟಿರ್ಥವು. ಹ್ಯಾಪ ಮೋರಿ ಹಾಕ್ಕೊಂಡು, ಜೊಲ್ಲು ಸುರುಸ್ಕೊಂಡು ಹೋಗೋ ಮಕ್ಕಳೂ ಚಂದ, ಆಗ್ದಿ tip top ready ಆಗಿ ಇಸ್ತ್ರಿ ಬಟ್ಟೆ, ಮುಖದ ಮ್ಯಾಲ ತಟ್ಗಗ ತಟಗು powder ಹಚ್ಚಕೊಂಡು, ತಲಿಗೆ ಎಷ್ಟು ಬೇಕೋ ಅಷ್ಟು ಎಣ್ಣಿ ಹಚ್ಚಿ, ಬೈತಾಲಿ ತಗದು ಬಾಚಿ, ಪಾಲಿಶ್ ಮಾಡಿರೋ shoe ಹಾಕ್ಕೊಂಡು ಹೋಗೋ ಮಕ್ಕಳೂ ಚಂದಾನ. ಮಕ್ಳು ಅಂದಮೇಲೆ ಅವು ಹೆಂಗಿದ್ರು ಚಂದಾನ, ಅಲ್ಲೇನು? (ನಾ first category ಮಗು). ಈ ಗದ್ದಲದೊಳಾಗ, ಮುದ್ದಾದ ಮಗು, ಬಣ್ಣ ಬಣ್ಣದ ಅಂಗಿ ಹಾಕ್ಕೊಂಡು, ಅಕಿಗಿಂತಾನು ಮುದ್ದಾದ ಹೆಜ್ಜೆ ಹಾಕ್ಕೊಂಡು ನಡ್ಕೊಂಬರ್ತಿದ್ಲು. ನನ್ನ ನೋಡದಾಕೆ "ಶ್ರೀಅಪ್ಪಿ, how's my new dress ? Happy Holi uncle" ಅಂಥಾ ನನ್ನ ಅನುಮತಿ ಇಲ್ದೆ ನನ್ನ chubby cheeks ಗೆ ಗುಲಾಬಿ ಬಣ್ಣ ಹಚ್ಚಿ ಹೋಗೆ ಬಿಟ್ಟಳು ಬಸ್ ಹತ್ತಲಿಕ್ಕೆ.


ನನ್ನ ವಾಯುವಿಹಾರ ಮುಗಿದ ಮ್ಯಾಲೆ , ಬಿಸಿಲ ಕಾಯಿಸ್ಕಂತ ampitheatre ಅಲ್ಲಿ ಕೂತಿದ್ದೆ. ನಾ ಸಣ್ಣಾವ ಇದ್ದಾಗ ಹೋಳಿ ಹಬ್ಬ ಹೆಂಗೀತ್ತು ಅಂಥ ವಿಚಾರ ಮಾಡ್ಕೊಂತ ಮನಸ್ಸು ಆ ಕಡೆ ಜಾರಿದ್ದು ನಂಗ ಗೊತ್ತಾಗಲೇ ಇಲ್ಲ.

ಹೋಳಿಗೆ ಇನ್ನೊಂದು ವಾರ ಐತಿ ಅಂದ್ರ ಸಾಕು, ನಮ್ಮವ್ವ ನಮ್ಮ ನಾಕೂ ಜನದ್ದು ಹಳೇ ಅರಬಿ ಹುಡುಕಿಟ್ಟತಿದ್ಲು, ಅವು ಇನ್ನು ನಮಗ ಆಗಿ ಬರಲ್ಲ, ಇನ್ನೊಂದು ಸಲಾ ಸುಮ್ನ ಹಂಗ ನೋಡಿದ್ರ ಸಾಕು ಹರದ ಹೋಗಿ ಬಿಡಬೇಕು ಅಂಥಾ ಅರಬಿ ಅವು. ಸರಿ ಸುಮಾರು ಮೂರು ನಾಕು ವರ್ಷದಿಂದ ಸತತವಾಗಿ ಹಾಕ್ಕೊಂಡು ಉಜ್ಜಾಡಿ ಸಾಕಲೇ ಅಂದು ಬೀರೂ ಸೇರಿದ ಅರಬಿ ಅವು. ಅವನ್ನ ಹೋಳಿ ಆಡಾಕಾಂತಾನ ನಮ್ಮವ್ವ ತಗದು ಇಟ್ಟಿದ್ದು ಅಂಥ ನಮಗ್ ಆವಾಗ ಗೊತ್ತಾಗತಿತ್ತು. ಪಿಚಗಾರಿ ಕೋಡ್ಸು ಅಂಥಾ ಒಂದು ವಾರ ಹಿಂದ ಅಪ್ಪನ್ನ ಕಾಡಿ, ಬೇಡಿ, ಅತ್ತು ಕರ್ದು, ನಾಕ್ ಜನಕ್ಕ ಒಂದು ಪಿಚಾಗಾರಿ ತರಬಹುದು ಅಂಥ ಅನುಮೋದನೆ ಸಿಗ್ತಿತ್ತು. 

ಉಳಕಿದ ಎಲ್ಲಾ ಹಬ್ಬ ಹುಡಿಗೇರು ಹಬ್ಬ ಅನ್ನಿಸಿ ಬಿಡೋವ, ಅವರಿಗೆ ಹೊಸ dress ಕೊಡಿಸೋದು, ಪೂಜೆ ಪುನಸ್ಕಾರ, ಹಬ್ಬದ ಅಡಿಗಿ ಸಹ  ಎಲ್ಲಾ ಅವರಿಗೆ ಏನ್ ಬೇಕು ಅದು, ಹೆಂಗ್ ಬೇಕೋ ಹಂಗ, ಎಷ್ಟು ಬೇಕಾದ್ರೂ. ಹೋಳಿ ಮಾತ್ರ ಅಗ್ದಿ ಹುಡುಗರ ಹಬ್ಬ ಅನ್ನಿಸೋದು.ಯಾರ್ಯಾರೋ ಮನ್ಯಾಗ ಹಳೇ ಅರಬಿ, ಕುರ್ಚೆ, ಹಲಗಿ, ಹಗ್ಗ ಎನ್ ಕೈಯಗೆ ಸಿಗುತ್ತ್ ಅದು , ಕೇಳಿದಾಗ ಕೊಟ್ರೋ, ಸರಿ, ಇಲ್ಲಾ ತುಡುವು ಮಾಡೋದು, ಕಾಮಪ್ಪನ ಸುಡುಬೇಕಲ. ನಮ್ಮನ್ನ ಯಾರರ ಹಿಡಿದು ಕೇಳಿದ್ರ ಉತ್ತರ ತಯಾರಿತ್ತು "ಕಾಮಪ್ಪನ್ನ ಮಕ್ಕಳು, ಕಳ್ಳ ** ಮಕ್ಕಳು, ಏನೇನು ಕದ್ದರು, ......." 

ಈ ಉಡಾಳಾಗಿರಿ ಒಂದು ಕಡೆ ಆದ್ರ, ಇನ್ನೊಂದು ಗುಂಪು ಇರ್ತಿತ್ತು, ವರ್ಷಾ ಪೂರ್ತಿ ನಮ್ಮ ಓಣಿ, ಪಕ್ಕದ ಓಣಿ, ಹತ್ತಾರು ವಠಾರದಾಗ ಏನು ಗದ್ದಲ ಆಗೇವು, ಯಾರಿಗೆ ಯಾರ ಮುಖಾ ಕಂಡ್ರ ಆಗಂಗಿಲ್ಲ, ಅತೀ ಮುಖ್ಯವಾಗಿ, ಆಜೂ ಬಾಜ ಮನೆಯವರಿಗೆ ಆಗಿ ಬರೋ ಹಂಗಿಲ್ಲ, ಅಂಥಾ ಎಲ್ಲಾ ಮನೆ ಹಾಳ್ information collect ಮಾಡಿ, ಹೋಳಿ ಹಿಂದಿನ ರಾತ್ರಿ, ಅವರ ಅಂಗಳದಾಗಿನ ಸಾಮಾನ್ ಇವರ ಅಂಗಳದಾಗ, ಇವರದ್ದು ಅವರ ಅಂಗಳಾದಾಗ. ಬೆಳಿಗ್ಗೆ ಎದ್ದು ಇಬ್ಬರೂ ಮನೆಯವರು ಆ ಸಾಮಾನ್ ತೊಗೊಳೋಕಾಂತ್ ಮಾತಾಡಿ ದೋಸ್ತರಾಗಿದ್ದು ಕಮ್ಮಿ, ಬೆಳ್ ಬೆಳಿಗ್ಗೆ ಜಗಳ ಹತ್ತಿದ್ದು ಜಾಸ್ತಿ. ಯಾವ ಮನ್ಯಾಗ ಜಗಳ ಜಾಸ್ತಿ ಮಜಾ ಕೊಡೋದು ಆ ಮನಿ ಅಗಸಿ ಕಟ್ಟಿ ಮ್ಯಾಲ ನಮ್ಮ ಗುಡಾರ.

ಅವ್ವಾ ಎಷ್ಟ ಹೇಳಿ ಕಳಸಿರ್ಲಿ, "ನೋಡಪ್ಪಿ, ಗಲ್ಲಕ್ಕ ಚೂರ ಚೂರು ಬಣ್ಣ ಹಚ್ಚು, ಅವರೂ ಹಚ್ಚತಾರ, ಹಚ್ಚಿಸ್ಕೋ, ಹನ್ನೆರಡು ಅಷ್ಟೊತ್ತಿಗೆ ಮನ್ಯಾಗ ಇರಬೇಕು, ಸರಿನಾ". "ಹೂನಬೆ " ಅಂಥಾ ಗಲ್ಲ ಅಲ್ಲಾಡಿಸಿ, ಮನಿಯಿಂದ ಹೋರಾಗ ಬಿದ್ದ ಅರ್ಧ ತಾಸಿನಾಗ ಬಟ್ಟಿ ಛಿದ್ರ ಛಿದ್ರ ಆಗಿ ಕರೆಂಟ್ ವೈರ್ ಮ್ಯಾಲ ನೇತಾಡ್ತಿರ್ತಿದ್ವು. ಗಲ್ಲಕ್ಕ, ಹಣಿಗೆ ಅಷ್ಟ ಬಣ್ಣ ಹಚ್ಚೋ ಮಕ್ಕಳ ಅಲ್ಲಾ ನಾವು, ಎದರಿಗೆ ಬರೋವನ ಅಂಗಿ ಗುಂಡಿ ಕಿತ್ತು ಎದಿಗೆ, ಬೆನ್ನಿಗೆ ಕರ್ಮಾಟ ಎಲ್ಲಾ ಹಚ್ಚಿ, ತಲಿಗೆ ಒಂದು ತತ್ತಿ(egg) ಒಡದು, ರಾಡಿ ರಂಪಾಯಣ ಮಾಡಿ-ಮಾಡಿಸ್ಕಂಡು, ಹೆತ್ತವ್ವನ ಮುಂದ ಹೋಗಿ ನಿಂತ್ರ, "ಆವಾ ಹೋಳಿ ಆಡಾಕ ಹೋಗ್ಯಾನಪ, ಬಂದ್ರ ಯಾರು ಬಂದಿದ್ರು ಅಂಥ ಹೇಳ್ಲಿ, ಏನರ urgent ಕೆಲ್ಸಾ ಐತಿ" ಅಂಥಾ ಕೇಳಿದ್ದೂ ಉಂಟು. "ನಾನಬೆ " ಅಂಥಾ ಒಡೆದ ಗಂಟಲೊಳಗ ಹೇಳಿದ್ರ ನನ್ನ ಮಗ ಅಂಥ ಗುರ್ತು ಹಿಡಿಯಾಕ ಆಕೀಗೇ ಎರೆಡು ಮೂರು ನಿಮಿಷಾನಾದ್ರು ಬೇಕಿತ್ತು. 

ಬಣ್ಣ, ಗ್ರೀಸ್, ನಾಲಿ ನೀರು, ತತ್ತಿ, ಎದು ಎದ್ರಾಗ ಹೋಳಿ ಆಡಿಲ್ಲ. ಮನಿಗೆ ಬರೋ ಅಷ್ಟ್ರೋಳಾಗ 3-4 ಘಂಟೆ ಆಗೋದು, ಹೊಟ್ಟಿ ಹಸದು ತಳ ಮುಟ್ಟುತ್ತಿತ್ತು, ಆವಾಗ ಮನಿಗೆ ಬರ್ತಿದ್ವಿ. ಮನಿಗೆ ಬಂದ ಮ್ಯಾಲ ಒಂದು drum ನಾಗ ಬಣ್ಣ ಕಲಸಿ, ಚಂಬು, ವಾಟೆ, ಲೋಟ ಏನ್ ಸಿಕ್ಕಿತೋ ಅದರೊಳಗ ಮನೆರಿಗೆ ಎಲ್ಲಾ ಉಗ್ಗಿ, ಅಕ್ಕ ಪಕ್ಕದ ಮನೆಯವರಿಗೂ ಉಗ್ಗಿ ಆಟಾಡಿ ಬರೋ ಅಷ್ಟೊತ್ತಿಗೆ ಕಟ್ಟಗಿ ಒಲ್ಯಾಗ ಬಿಸಿ ಬಿಸಿ ನೀರು ಕಾದಿರವು, ಕೊಬ್ಬರಿ ಎಣ್ಣೆ ಮೈಗೆಲ್ಲ ಹಚ್ಚಿ, ತಿಕ್ಕಿ ತೀಡಿದ ಮೇಲೆ ಸ್ನಾನ, ಆವಾಗ ನಮ್ಮ ಅಮ್ಮಂಗೆ ಖಾತ್ರಿ ಆಗೋದು ನನ್ ಮಗಾ ಇವಾ ಅಂಥ. 

ಅಪ್ಪನಿಂದ ಹೊಡತಗಳು, ಅವ್ವನಿಂದ ಬೈಗುಳಗಳು ಇರ್ದ ಯಾವ ಹೋಳಿ ಹಬ್ಬ ಪೂರ್ತಿ ಆದೀತು. "ಹೋಳಿ ಅದ ಮಗನ" ಅಂಥಾ ಸಿಕ್ಕಿ ಸಿಕ್ಕಿದೋರಿಗೆ ಏನೇನೋ ಹಚ್ಚಿ ಬಂದ್ರ, ಅವರೆಲ್ಲ ಅವರಪ್ಪನ್ನ ಕರ್ಕೊಂಬಂದು ನಮ್ಮಪ್ಪನ ಜೊತೆ ಒಂದೆರೆಡು ದುಂಡು ಮೇಜಿನ ಸಭೆ ಮುಗಿದಮೇಲೆ ನಮಗೆ ಒಂದು ಅಂದಾಜು ಸಿಗೋದು, ಇವತ್ತು ಎಷ್ಟು ಹೊಡ್ತಾ ಬೀಳಬೋದ ಅಂಥ.

ಹಿಂಗೆಲ್ಲಾ ಆಡಿದ ನಾವು, ನಾಗರೀಕ ಸಮಾಜದಲ್ಲಿ , ಹೊಸಾ ಬಿಳಿ ಬಟ್ಟೆ ಹಾಕ್ಕೊಂಡು, ಗಲ್ಲ ಗದ್ದಕ್ಕೆ ಅಷ್ಟೇ ಪುಡಿ ಬಣ್ಣ ಹಚ್ಚಿ "Happy ಹೋಳಿ" ಅನ್ನೋ ಸ್ಥಿತಿಗೆ ಬಂದು ಬಿಟ್ಟೇವಿ.

ಹೋಳಿ, ನಮ್ಮ ವರ್ಷದ ಕೊನೇ ಹಬ್ಬ, ವರ್ಷಪೂರ್ತಿ ಬೆಳಿಸಿಕೊಂಡ ಕಾಮನೆಗಳು, ಸೋಲುಗಳು, ಬಂಧನದ ಬೇಲಿಗಳನ್ನ ಸುಟ್ಟು, ನಮ್ಮೆಲ್ಲ ಮುಖವಾಡ, ಕಳಂಕ ಕಳಚಿ ಹೊಸಾ ವರ್ಷವನ್ನ ನವೀನ ಮನಸ್ಸಿಟ್ಟು ಬರಮಾಡಿಕೊಳ್ಳೋಕೆ ತಯಾರಿ ಮಾಡೋಣ.


ಹ್ಯಾಪಿ ಹೋಳಿ.

############ ಶುಭಂ ###########

ಇಂತಿ, 

ಶ್ರೀ ಅಪ್ಪಿ.