ಶ್ರೀ ಮತ್ತೇ ಅಪ್ಪಿಯರದ್ದು ಸರಿ ಸುಮಾರು ೩೦_೩೫ ವರ್ಷಗಳ ಹಳೆಯ ಸಂಬಂಧ. ಪುಟಗೋಸಿ ಗೆಳಯರಲ್ಲದೆ ಹೋದರೂ ಗಳಸ್ಯ ಕಂಠಸ್ಯ ಸ್ನೇಹಿತರು. ಬೆಳೆದಿದ್ದು ಬೇರೆ ಬೇರೆ ಪರಿಸರವಾದರೂ ಇಬ್ಬರ ಪ್ರಕೃತಿ, ಪ್ರವೃತ್ತಿ, ಹವ್ಯಾಸಗಳು ತೀರಾ ಹಾಸು ಹೊಕ್ಕುವಂತಹವೇ. ಬೆಳಿಗ್ಗೆ 9 ಹೊಡೆದರೆ ಸಾಕು, ಅಪ್ಪಿ ಎಂತಹ ಕೆಲಸವಿದ್ದರೂ ಬಿಟ್ಟು ಶ್ರೀ ಮನೆಯ ಬಾಗಿಲಿಗೆ ಹಾಜರು. ರಜೆಯ ಮರುದಿನ ದಿನಪತ್ರಿಕೆ ಬರೋದು ತಪ್ಪಿತೋ ಏನೋ, ಇವರ ಹಾಜರಿ ತಪ್ಪಿದ್ದೇ ಇಲ್ಲ. ಅಪ್ಪಿಗೆ ಶ್ರೀ ಮನೆಯಲ್ಲಿ ಮಾಡೋ ಇಡ್ಲಿ, ತೆಂಗಿನ ಕಾಯಿ ಚಟ್ನಿ ಅಂದರೆ ಪಂಚ ಪ್ರಾಣ. ಅದು ಶ್ರೀ ಮನೆಯ ಎಲ್ಲರಿಗೂ ಗೊತ್ತು ಹಾಗೆಯೇ ಅವರೆಲ್ಲರಿಗೂ ಅಪ್ಪಿ ಮನೆಗೆ ಬಂದರೆಂದರೆ ಬಡಿಸಿ ಅವರ ಮಾತು ಕೇಳುತ್ತಾ ತಿಂಡಿ ತಿನ್ನುವ ಖುಷಿ. ಅಪ್ಪಿ ಗೇಟು ತೆಗೆದು ಮನೆ ಹೊಸ್ತಿಲು ದಾಟಿ ಪಡಸಾಲೆಗೆ ಬಂದರೆ ಶ್ರೀ ಅವನ ಆ ದಿನದ ಮೆಚ್ಚಿನ ಅಂಕಣ ಮುಗಿಸಿ 9 ಘಂಟೆಗೆ ಇವರ ಬರುವಿಕೆಗೆ ಕಾಯುತ್ತಾ ಕೂತಿರುತ್ತಾನೆ. ಅಪ್ಪಿ ಬಂದ ತಕ್ಷಣ, "ಲೇಯ್ , ಇವತ್ತೇನು?"
"ಇಡ್ಲಿ, ತೆಂಗಿನಕಾಯಿ ಚಟ್ನಿ "
" ಒಂದು ಡಬರಿ ಚಿತ್ರಾನ್ನ, double ommlette"
" ತಂಗಳನ್ನದ ಪುಳಿಯೋಗರೆ, ಒಂದು ಹಿಡಿ ಮೊಸರು ಮೆಣಸಿನಕಾಯಿ"
" ಪುಲಾವು, ಪಚ್ಚಡಿ "
" ಟೊಮಾಟೋ ಬಾತ್, ಮೆಣಸಿನಕಾಯಿ ಬಜ್ಜಿ ".
ದಿನಕ್ಕೊಂದು ಅಡುಗೆ, ನಂಚಿಕೊಳ್ಳಲು ಏನೋ ಒಂದು ಬೇಕೇ ಬೇಕು, ಇಬ್ಬರಿಗೂ. ಮೊಸರನ್ನಕ್ಕೆ ನಿಂಬೆ ಹಣ್ಣಿನ ಉಪ್ಪಿನಕಾಯಿಯೇ ಬೇಕು. ಬಿರಿಯಾನಿ ಮಾಡಿದರಂತೂ, ಅಪ್ಪಿ ಬರೀ ಅನ್ನವನ್ನೇ ತಿನ್ನುವ ಗಿರಾಕಿ ಆದರೆ ಅದರ ಜೊತೆ ಬದನೆಕಾಯಿ ಚಾಲನಾ ಇದ್ದರೆ ಅವರ ನಗು ಯಾವ ದಾಸವಾಳದ ಅಗಲಕ್ಕೂ ಸಮನಿಲ್ಲ ಬಿಡಿ.
ಅದೇನು ನoಟೋ, ಶ್ರೀ ಮತ್ತೇ ಅಪ್ಪಿಯದ್ದು, ಬೆಳಿಗ್ಗೆ ತಿಂಡಿ ತಿಂದು ಹೊರಟರೆಂದರೆ ಸಾಯಂಕಾಲ ಆರು ಘಂಟೆಗೆ ಕಾಫಿಗೆ ಹಾಜರು. ಕಾಫಿ ಅಂದರೆ ಶ್ರೀ ಮನೆಯ ಕಾಫಿ, ನಗು ಮುಖದೊಂದಿಗೆ ಮನೆ ಯಜಮಾನಿ ಶಾರದಮ್ಮ ಕಾಫಿ ಕೊಟ್ಟರೆ ಅಪ್ಪಿಗೆ ಅದೇ ಅಮೃತ. ಕಾಫಿ ಆದಮೇಲೆ ಒಂದು - ಒಂದುವರೆ ತಾಸು ಹರಟೆ ಹೊಡೆಯುತ್ತಾರೆ ಇಬ್ಬರೂ, ಮನೆಯ ಅಂಗಣದ ಕಟ್ಟೆಯ ಮೇಲೆ ಕೂತು. ಇಷ್ಟು ವರ್ಷಗಳ ಕಾಳ, ದಿನವೂ ಅದೇನು ಮಾತಾಡುತ್ತಾರೋ . ಹಾದಿ ಹೋಗುಕರೆಲ್ಲ ತಿರುಗಿ ನೋಡುವಷ್ಟು ಕೆಕ್ಕರಿಸಿ ನಗು ಬೇರೆ ಆವಾಗಾವಾಗ. ಯಾವುದೋ ಬೀದಿಯ ರಸ್ತೆ ಹಿಡಿದು ರಹದಾರಿ ಹೊಕ್ಕು ರಾಜಮಾರ್ಗದಲ್ಲಿ ತೇರು ತೇಲಿಸಿ ಸಮುದ್ರಗಳನ್ನು ದಾಟಿ ಸುರಂಗ ಮಾರ್ಗ ಹೊಕ್ಕು ಪುಷ್ಪಕ ವಿಮಾನವೇರಿ ಎಲ್ಲೆಲ್ಲಿಯೋ ಹೊಗುತ್ತದೆ ಇವರ ವಿಚಾರ ಧಾರೆಗಳು.ಒಂದೊಂದು ಸಲವಂತೂ ವಿಚಾರ ವಿನಿಮಯ ವಾದವಾಗಿ, ವಾದ ಜಗಳವಾಗಿ, ಕೈ ಕೈ ಮಿಲಾಯಿಸುವಷ್ಟರ ಮಟ್ಟಿಗೆ ಹೋಗಿದ್ದು ಉಂಟು. ನಾಳೆಯಿಂದ ಅಪ್ಪಿ, ಶ್ರೀ ಮನೆಗೆ ಬರುವುದಿಲ್ಲವೇನೋ ಅನ್ನುವಷ್ಟು.
ಮರುದಿನ ೯ ಘಂಟೆಗೆ "ಲೇಯ್ , ಇವತ್ತೇನು?".
ಆವತ್ತು ಕಾರ್ತಿಕ ಸೋಮಾರ ಇರ್ಬಕು , ಎಂದಿನಂತೆ ಅಪ್ಪಿ ೯ ಘಂಟೆಗೆ ಹಾಜರು. ಶುಭ್ರವಾಗಿ ಶ್ಯಾವಿಗಿ ಉಪ್ಪಿಟ್ಟು, ಖಾರದ ಚಟ್ನಿ ಮಾಡಿ ಟೇಬಲ್ ಮೇಲಿಟ್ಟಿದ್ದರು ಶಾರದಮ್ಮ. ಕಾರ್ತಿಕ ಮಾಸದಲ್ಲಿ ಶಾರದಮ್ಮನವರಿಗೆ ಅವರೆಕಾಳು ಹೆಂಗ್ ಸಿಗ್ತಾವೋ ಆ ಶಿವಂಗ ಗೊತ್ತು. ಅವರೆಕಾಳು ಹಾಕಿ ಶ್ಯಾವಿಗಿ ಉಪ್ಪಿಟ್ಟು ಮಾಡ್ತಾರ ಶಾರದಮ್ಮನೋರು, ಒಂದು ಸಲಾ ತಿನ್ನಬೇಕು ನೀವು. ಶ್ರೀ ಮತ್ತ ಅಪ್ಪಿ ತಿನ್ನಲಿಕ್ಕೆ ಶುರು ಮಾಡಿದ್ರು, ಅಪ್ಪಿಗೆ ಅಲ್ಲೇ ಓರಣವಾಗಿ ಜೋಡಿಸಿಟ್ಟ ೨ ಬೆಳ್ಳಿ ತಟ್ಟಿ ಕಂಡವು.
"ಹೊಸಾವ ಇವು, ಯಾವಾಗ ತಂದ್ರಿ" ಅಪ್ಪಿ ಕೇಳಿದ.
"ಇಲ್ಲಲೇ, ಹಳೆವು. ಬಾಗಿಲು ಮುಂದ ರಾತ್ರಿ ಯಾರೋ ಬಿಟ್ಟು ಹೋಗಿದ್ರು, ಗಬಕ್ಕನ ಹೋಗಿ ಆಯ್ಕೊಂಡ್ ಬಂದೆ, ಯಾರಿಗೂ ಹೇಳ್ಬೇಡಾ ಮತ್ತ".
"ಒಟ್ಟ, ಒಚ್ಚಿ ಒಗಿಯೋದ ನೋಡ್ ನೀ, ಖರೆ ಹೇಳಲೇ".
" ಕಾರ್ತಿಕ ಸೋಮಾರ, ಇಕಿ ಯಾರೋ ಸ್ವಾಮೆರನ್ನ ಕರದಾಳ ಸಂಜಿ ಬಿನ್ನಕ್ಕ, ಹಂಗಾಗಿ special silver plates ಪಾ".
"ಜೋರಾತಪ, ಒಳ್ಳೆದು. ನಡೀಲಿ, ನಡೀಲಿ".
"ಅಪ್ಪಿ, ನೀನು ಬಂದು ಬಿಡು. ನೀನಿಲ್ದ ಕೈಕಾಲ ಆಡಂಗಿಲ್ಲಾ ನಂಗ".
" ನೀ ಕರಿ, ಬಿಡು, ನಾ ಬರವ್ನ, ಸ್ವಾಮೇರ್ನ ಕಂಡು ಕಾಲು ಮುಗಿದು ಆಶೀರ್ವಾದ ತೊಗೊಂಡು ಥರಾವರಿ ಅಡುಗಿ ಖಾಲಿ ಮಾಡೇ ಹೋಗೋವ್ನ" ಅಪ್ಪಿ ಮಾತಿಗೆ ಶ್ರೀ ಮತ್ತೆ ಮನೆವರೆಲ್ಲ ನಗುವಿನ ಪಾಲಾದರು.
ಸಂಜೆ ಆತು, ಸ್ವಾಮೇರು ಬಂದ್ರು, ಪೂಜೆ ಸಾಂಘವಾಗಿ ಪೂರ್ತಿ ಆತು. ಊಟಕ್ಕಂತ ಕುಂತ್ರು. ಸ್ವಾಮೇರು, ಶ್ರೀ ಗೆ ಬೆಳ್ಳಿ ತಟ್ಟಿ ಇಟ್ಟರು ಶಾರದಮ್ಮ, ಅಪ್ಪಿಗೂ, ಮಗನಾದ ಗಿರಿಗೂ ಬಾಳೆ ಎಲೆನೂ ಇಟ್ಟರು. ಅಪ್ಪಿ phone ರಿಂಗಣಿಸಿತು. Phone ಮಾತಾಡಿದ ಅಪ್ಪಿ ಎದ್ದು ನಿಂತ.
ಶ್ರೀ ಗಾಬರಿಯಿಂದ "ಯಾಕ, ಏನಾತು " ಅಂತ ಕೇಳಿದ.
"ಇಲ್ಲ; ನಮ್ಮ ಮುಸ್ತಫಾ ಮನೆಯವರಿಗೆ ಆರೋಗ್ಯದ ಏರುಪೇರು ಅಂತ, ಕಾರು ತೊಗೊಂಡು ಲಗೂನ ಬರ್ರಿ ಅಂದ್ರು, ಬಹುಶಃ ಉಡುಪಿ ಇಲ್ಲಾಂದ್ರ ಮಣಿಪಾಲ್ ಗೆ ಹೋಗೋದು ಆಗಬಹುದು, ನೀವು ಮುಂದುವರಿಸರಿ. ಶ್ರೀ, ನಾ ಅಲ್ಲಿಗೆನರ ಹೋದ್ರ ಮೂರು ನಾಕು ದಿನಾ ಆದೀತು, ಊರಿಗೆ ಬಂದು ತಕ್ಷಣ ಇಲ್ಲಿಗೆ ಬರ್ತೀನಿ".
ಇವತ್ತಿಗೆ ಸರಿಯಾಗಿ ಒಂದೂವರೆ ವಾರ ಆಯ್ತು ಅಪ್ಪಿ ಹೋಗಿ, ನಿನ್ನೆ ಶ್ರೀ ಗೆ ಕಾಲ್ ಮಾಡಿ ಹೇಳಿದ್ದ,
"ಎಲ್ಲಾ ಸರಿ ಹೋಗೇತಿ, ಬಾಭಿಜಾನ್ discharge ಆದ್ರ, ರಾತ್ರಿ ಹೊಂಟು ಬೆಳಿಗ್ಗೆ ಅಷ್ಟೊತ್ತಿಗೆ ಬರ್ತೀವಿ".
"ಶಾರದಾ, ನಾಳೆ ಅಪ್ಪಿ ಬರ್ತಾನ, ಇಡ್ಲಿ ಮಾಡ್ಲಿಕ್ಕಾಗ್ತದ?". ಕೂಗಿ ಕೇಳಿದ್ದ ಶ್ರೀ.
"ಹೂಂ, ಮಾಡಿದ್ರಾತು. ಈಗರ ಚೂರು ನಗರಿಪಾ, ಹ್ಯಾಪ ಮಾರಿ ಹಾಕೊಂಡು ಮೂಲ್ಯಾಗ ಕುಂತೀರಿ ಒಂದು ವಾರದಿಂದ. ನೋಡ್ಲಿಕ್ಕಾಗವಲ್ಡು ನಿಮ್ಮನ್ನ".
ಶ್ರೀ ಬೆಳಿಗ್ಗೆ ಎದ್ದು ಸ್ನಾನ ಮಾಡಿದವನೇ , ಪೇಪರ್ ಕೂಡಾ ಓದಲಿಲ್ಲ, ೮ ಘಂಟೆಗೆ ಗೇಟ್ ಹತ್ರ ಕಾಯ್ಕೊಂತ ಆಕಡೆಯಿಂದ ಈಕಡೆ, ಈಕಡೆಯಿಂದ ಆಕಡೆ, ಓಡಾಟ.
ಗಡಿಯಾರ ಒಂಬತ್ತು ಘಂಟೆ ತೋರಿಸಿತ್ತು,
"ಲೇಯ್ , ಇವತ್ತೇನು?". ಅಪ್ಪಿ ಗೇಟ್ ಹತ್ರ ಕೇಳಿದ್ದ. ಶ್ರೀ ಅವನನ್ನ ನೋಡಿದ್ದೇ, ಓಡಿಹೋಗಿ ಗಟ್ಟಿಯಾಗಿ ತಬ್ಬಿಕೊಂಡ. ಅಪ್ಪಿಗೆ ಆಶ್ವರ್ಯ ಆಗಿ "ಏನಾತಲೇ", ಅಂತ ಕೇಳಿದ. ದರದರನೆ ಎಳೆದುಕೊಂಡು ಒಳಗೆ ಕರೆದೊಯ್ದ ಶ್ರೀ.
Dining table ಅಲ್ಲಿ ಎರೆಡು ಬೆಳ್ಳಿ ತಟ್ಟೆಯಲ್ಲಿ, ಬಿಸಿ ಬಿಸಿ ಇಡ್ಲಿ ಇನ್ನೂ ಹೊಗೆಯಾಡತಿದ್ದವು, ಗಟ್ಟಿಚಟ್ನಿಗೆ ಒಗ್ಗರಣೆ ಹಾಕಿ ಮಟ್ಟಸವಾಗಿ ಬಡಿಸಿಟ್ಟಿದ್ರು ಶಾರದಮ್ಮ.
"ಅಬಾಬಬ್ಬಾ, ಇವತ್ತು ಯಾರ ಸ್ವಾಮೇರು ಬರ್ತಾರಪ್ಪ, special silver plate ಹೊರಾಗ ಬಂದಾವು " ಅಪ್ಪಿ ಕೇಳಿದ.
ಶ್ರೀ ಕಣ್ಣು ತೇವ ಆಗಿದ್ವು, ಗಂಟಲು ಒಣಗಿತ್ತು, " ದೋಸ್ತ, ಯಾರೋ ಸ್ವಾಮೇರ ಬರ್ತಾರಂಧ್ರ ವಿಶೇಷ ಅಂದುಕೊಂಡಿದ್ದೆ, ಈ ಒಂದು ವಾರದೊಳಾಗ ನನಗನಿಸಿದ್ದು, ಎಲ್ಲಾರಗಿಂತಾ ವಿಶೇಷ ನೀನಲೆ.ದಿನಾ ಬರೋ ನೀನು ಒಂದೇ ಒಂದು ದಿನಾ ಬರ್ಲಿಲ್ಲ ಅಂದ್ರ ಮನಸ್ಸು ತತ್ತರಿಸಿ ಹೋತು, ನಿನ್ನಂಥ ದೋಸ್ತ ಒಬ್ಬವಾ ಇದ್ರ ಅವನ ಎಲ್ಲಾರಿಗಿಂತ ವಿಶೇಷ" .
######## ಶುಭಂ ##########
ಇಂತಿ ನಿಮ್ಮ ಪ್ರೀತಿಯ,
ಶ್ರೀಅಪ್ಪಿ.

1 comment:
ನಿಮ್ಮ ಈ ಪ್ರಸಂಗ ನೋಡಿ ನಮ್ಮ ಕಣ್ಣು ತೇವ ಆದವು, ತುಂಬಾ ಚೆನ್ನಾಗಿದೆ
Post a Comment