Sunday, February 15, 2026

ನಾನೋ, ನನ್ನ ಉಪವಾಸವೋ

 "ಈ ಶಿವರಾತ್ರಿ ಅಂದ್ರ ಏನು? ಈ ಹಬ್ಬದ ವಿಶೇಷತೆ ಏನು ? ನಮ್ಮ ಯಾವ ಹಬ್ಬಗೋಳಾಗ ರಾತ್ರಿ ಅಂಥ ಪದಾನೇ ಬರಂಗಿಲ್ಲ ಅಲ್ವಾ" ಮಗ ಕೇಳಿದ ಪ್ರಶ್ನೆಗೆ ನನ್ನ ಹತ್ತಿರ ಉತ್ತರ ಹುಡುಕೋ ಉದ್ವೇಗಕ್ಕಿಂತ ಇಂಥ ಪ್ರಶ್ನೆ ಕೇಳಿದನಲ್ಲ ಅನ್ನೋ ಹೆಮ್ಮೆ ಆಯ್ತು ನನಗೆ.

"ಶಿವರಾತ್ರಿ ಅಂದ್ರೆ ಶಿವನ ಹಬ್ಬ, ಶಿವಾ ಪಾರ್ವತಿ ಸಮಾಗಮದ, ಶಿವ ತಾಂಡವ ನೃತ್ಯ ಮಾಡಿದ, ಸಮುದ್ರ ಮಂಥನದಲ್ಲಿ ನಂಜನ್ನು ಕುಡಿದ ಶಿವನ ಆರಾಧನೆಯ ರಾತ್ರಿ. ಈ ದಿನಪೂರ್ತಿ ಫಲಾಹಾರ  ಸೇವಿಸಿ, ಉಪವಾಸ ಇದ್ದು, ರಾತ್ರಿಪೂರ್ತಿ ಶಿವನ ನಾಮಸ್ಮರಣೆ, ಭಜನೆಯಲ್ಲಿ ಜಾಗರಣೆ ಮಾಡ್ತೀವಿ" ನಂಗ ಗೊತ್ತಿರುವಷ್ಟು ಎಷ್ಟು ಸರಳ್ ಹೇಳ್ಲಿಕ್ಕೇ ಆಗ್ತದೋ ಹೇಳಿ ಮುಗಿಸಿದೆ.

"ಶಿವನ ಹುಟ್ಟುಹಬ್ಬಾನ, ಮತ್ತ ನೀ ಹೇಳೋಬೇಕಿದ್ರ ಶಿವಾ ಪರಮಾತ್ಮ, ದೈವಗಳ ದೇವ, ಅವರಿಗೆ ಹುಟ್ಟೂ ಇಲ್ಲಾ, ಸಾವೂ ಇಲ್ಲಾ...".  ನನ್ನ ಮಗನ ಪ್ರಶ್ನೆ ಪತ್ರಿಕೆ ಅಷ್ಟಕ್ಕ ಮುಗಿದಿದ್ರೆ ಅವನಿಗೆ ನಾ ಗಿರಿ ಅನ್ನೋ ಬದಲು ಅಕ್ಷಯಪಾತ್ರೆ ಅಂತಾ ಯಾಕ ಕರಿಬೇಕಿತ್ತು.

ಇನ್ನೂ ಏನೋ ಕೇಳ್ಬೇಕು ಅಂತಿದ್ದವನಿಗೆ ಸ್ನಾನ ಮಾಡ್ಕೊಂಬಾ ಅಂಥ ದಬಾಯಿಸಿ ಕಳಿಸಿದೆ, 

" ಅಪ್ಪ, ನಾ ಇವತ್ತ ಟಬ್ ನಾಗ ಸ್ನಾನ ಮಾಡಲಿ" . 

 " ಹೂಂ, ತಲಿ ಸ್ನಾನ ಮಾಡು, ಚೋಲತ್ನಾಗ ಶಾಂಪೂ ಹಚ್ಕೋ ".

 ಅವಾ ಕುಣಿದಾಡಿಕೊಂತ ಸ್ನಾನಕ್ಕ ಅಂಥ ಹೊಂಟ, ತಟ್ಟಂಥ ನಾ ChatGPT ಶರಣ ಹೋದೆ.ನನಗ ಗೊತ್ತು ನಾ ಹಾಕಿದ್ದು ಅಲ್ಪವಿರಾಮ, ಅವಾ ಸ್ನಾನ ಮಾಡಿ ಬಂದು ತಕ್ಷಣ ಅವನ ಪ್ರಶ್ನಾ ಉಗಿಬಂಡಿಗೆ ಮತ್ತ ಸ್ವಲ್ಪ ಇದ್ದಿಲು ಹಾಕ್ಕೊಂಡು ಬಂದು ನನ್ನ ಪಕ್ಕಾ ಕೂತ್ಕೊಳುತ್ತ ಅಂತ. ಇವತ್ತು ಶಿವ ಸ್ತುತಿ ಜಪಿಸೋ ಮೊದಲು ಇವನ ೧೦೦೮ ಕುತೂಹಲಗಳಿಗೆ ನಾನು ಉತ್ತರ ಪತ್ರಿಕೆ ready ಇಟ್ಕೋಬೇಕಿತ್ತು. 

ನನಗ ಇಷ್ಟ ಆಗೋ ಹಬ್ಬಗಳಲ್ಲಿ ಒಂದಾದ ಶಿವರಾತ್ರಿ ಬಗ್ಗೆ,ChatGPT, Google ಹುಡುಕಿ ನನ್ನ ಮಗನಿಗೆ answer ಮಾಡೋ ಅಷ್ಟು ಮಬ್ಬ ಆಗಿ ಬಿಟ್ಟೆ ನಾ. ಇದು ನಂಗ ಸ್ವಲ್ಪ ಖೇದ ಉಂಟು ಮಾಡ್ತು ಆದ್ರೂ ನಾ ಅದರ ಬಗ್ಗೆ ಸ್ವಲ್ಪ ಓದಿಕೊಂಡಿದ್ದು ಖರೇ. 

ಅವಾ ಸ್ನಾನ ಮುಗಿಸ್ಕೊಂಬಂದ, ನಾ ನಸಿಕನಾಗ ಎದ್ದು ಬೆಳಗಿನ ಕೆಲಸ ಎಲ್ಲಾ ಮುಗಿಸಿ ಬಿಸಿ ಬಿಸಿ ನೀರೊಳಗ ಸ್ನಾನ ಮಾಡಿ ಬೆಳಗ್ಗಿನ ಉಗುರುಬೆಚ್ಚಗಿನ ನೀರು ಕುಡುಕೊಂತ ಕುಂತಿದ್ದೆ. ಗಿರಿ ಎದ್ದು ಬಂದು ಇಷ್ಟೆಲ್ಲ ಗಬರಾಡಿಸಿ ಹೋಗಿದ್ದ . ೧೦೦೮ ಶಿವ ಸ್ತುತಿ ಮುಗಿಸಿ ಪೂಜೆ ಮಾಡಿ ಎದ್ದೇಳಲಿಕ್ಕೆ ಸ್ವಲ್ಪ ಸಮಯ ಆಗಿತ್ತಾದರೂ ಗಿರಿ ಹಣೆ ಮೇಲೆ ಒಂದು ಪ್ರಶ್ನೆ ಚಿನ್ಹೆ ಕಾಣಿಸಿ "ಯಾಕ, ಏನಾಯ್ತು" ಅಂದೆ.

""ಓಂ ಅಮುಖಾಯೆ ನಮಃ" ಅಂದ್ಯಲ್ಲ, ಅದರ ಅರ್ಥ ಏನು?"

"ಆಗ್ದಿ ಸರಳ್ ಕನ್ನಡ ಅಲ್ಲೇನೋ, ಮುಖಾ ಇಲ್ದಾವ, faceless".

"ಮತ್ತ ಇಷ್ಟೊತ್ತನ್ನಕ ಶಿವನ  ಫೋಟೋ ಇಟ್ಕೊಂಡು ಪೂಜೆ ಮಾಡದಿ, ಬಿಲ್ಪತ್ರಿ ಹಾಕಿದೀ".

"ಗಿರಿ, ಇವತ್ತು, ಮೊದಲ ಉಪವಾಸ, ಆಮೇಲೆ ಜಾಗರಣಿ ಬೇರೆ, ನಾಳೆ ನೀನವು ಎಲ್ಲಾ queations ಗೂ answer ಮಾಡ್ತೇನಿ, please".

"ಜಳಕ ಮಾಡು ಅಂದೇ, ಮಾಡಿದೆ, ಪೂಜೆಗೆ ಜೊತಿಗೆ ಕುಂದರು ಅಂದೆ, ಕೂತುಕೊಂಡೆ, ಮುಂದ?"

" ಒಂದು ಬಾಳೆ ಹಣ್ಣು, ಹಸುರ್ ಸೇಬು, ಒಂದು ಹೋಳು ಅನಾನಸ್, ಬಟ್ಟಲು ದ್ರಾಕ್ಷಿ ಹಣ್ಣು, ಒಂದೆರಡು ಹೋಳು ಕಲ್ಲಂಗಡಿ ಹಣ್ಣು, ಇದೆಲ್ಲಾ ಒಂದು ಪರಾತದೊಳಗ ಹಾಕಿಟ್ಟೇನಿ, ತೊಗೊಂಬಾರೋ".

"ಅಪ್ಪಾ, ಇದಕ್ಕ ಯಾ ದೇಶದೊಳಾಗ ಉಪವಾಸ ಅಂತಾರ, ಎಷ್ಟರ calories intake ಆಗ್ತದ, ಒಂಚೂರು ಖಬರೈತಿ ನಿಮಗ"

"ಇದು ಫಲಾಹಾರ, ಶಿವರಾತ್ರಿ ಒಳಗ ಇದೆಲ್ಲಾ allowed, ಹೊಟ್ಟೆ ಚೂರು ಚೂರು ಅನ್ಲಿಕತ್ತದ. Please ತೊಗೊಂಬಾರೋ ".

"ನಿಮಗೆಲ್ಲ ನಿರ್ಜಲ ಏಕಾದಶಿನ ಚೊಲೋ, ಅವತ್ತು ಒಂದಿನ ಉಪವಾಸ ಕರೆಕ್ಟ್ ಆಗಿ ಮಾಡ್ತೀರಿ ನೋಡರಿ ನೀವು. ಯಾವ ಯಾವ ಹಬ್ಬದಾಗ ಎನ್ ಮಾಡಬಾರದು ಅದನ್ನ ಎಷ್ಟ ಮಾಡಿದರ ok ok ಅಂತ correct ಆಗಿ ಕೇಳ್ಕೊಂಬಂದು ನಿಮಗ ಎಷ್ಟು ಬೇಕು ಅಷ್ಟು ಮಾಡ್ತೀರಿ, ಅದನ್ನ ಉಪವಾಸ ಅಂತಾ ಬೇರೆ ಕರೀತೀರಿ, ಸ್ವಚ್ಛಾತು ಹೋಗಿರಿ".

ಅವಾ ಹೇಳಿದ್ದು ಖರೇ ಹೌದೋ ಅಲ್ವೋ, ಮನಸ್ಸಿಗೆ ಕಸಿವಿಸಿ ಆಗಿದ್ದಂತೂ ಖರೆ ಖರೆ.

ಪರಾಥ ತಂದೀಟ್ಟವನ ಮುಖದೊಳಗ ಇನ್ನೊಂದು ಪ್ರಶ್ನಾರ್ಥಕ ಚಿನ್ಹೆ ಇತ್ತು, 

"ಈಗಿನಾತು, ಮತ್ಯಾಕ ಮುಖಾ ಗಂಟಿಟ್ಕೊಂಡಿ ಗಿರಿ ".

"ಉಪವಾಸ ಏನೋ ಹಿಂಗ ಮಾಡ್ಲಿಕತ್ತಿರಿ, ಜಾಗರಣೆ ಎನ್ ಮಾಡ್ತೀರಿ", ಅವಾ ಕೇಳಿ ಹಗುರಾಗಿಬಿಟ್ಟ. ಸಂಜಿಕ ೭:೩೦ ಗೆ ಊಟಾ, ೯ ಘಂಟೆಗೆ ನಿದ್ದೆ ಮಾಡೋ ದೇಹಾ ಇವತ್ತು ಜಾಗರಣಿ ಹೆಂಗ ಮಾಡ್ತತಿ ಅಂದುಕೊಂಡಿರಬೇಕು ಅವಾ.

"ಪಕ್ಕದ ಮನಿ ಸತೀಶ್ ಸರ್ ಗೆ ಸಾಯಂಕಾಲ ಬರ್ಲಿಕ್ಕೆ ಹೇಳೇನಿ, ಒಂಚೂರು ಹರಟೆ ಹೊಡದು, ಹಾವು ಏಣಿ, ಚದುರಂಗ, ಏಳು ಮನಿ ಚಕ್ಕಾಟ ಆಡಿ, ಆಮೇಲೆ ಬೆಳವಡಿ ಮಲ್ಲಮ್ಮ, ಸಂಗ್ಯಾ ಬಾಳ್ಯಾ ಸಿನಿಮಾ ನೋಡೋ ಅಷ್ಟೊತ್ತಿಗೆ ಚುಮು ಚುಮು ನಸಿಕಾಗೀರ್ಥತಿ, ದೇವರಿಗೆ ಕೈ ಮುಗಿದು ಮಕ್ಕೊಳೋದು ".

"ಹೋ, ಜಾಗರಣಿ ಅಂದ್ರ ಇಷ್ಟ ಏನೂ? ನಾ ಏನು ಪೂಜೆ, ಭಜನೆ ಇರ್ತವು ಅನ್ಕೊಂಡಿದ್ದೆ ".

" ಹೂಂ, ಅದೂ ಮಾಡ್ಬೋದು, ನಾ ಇದು ಮಾಡಿ ರಾತ್ರಿ ಪೂರ್ತಿ ಎಚ್ಚರ ಇದ್ದು ಮಕ್ಕಂತೇನಿ".

" ಶುದ್ದಾತು, ಚೊಲೋ ಅದ ನಿಮ್ಮ ಶಿವರಾತ್ರಿ".




3 comments:

Mamta Rivonkar said...
This comment has been removed by the author.
Loka said...

ವಾವ್ ಚೆನ್ನಾಗಿ ಬರೆದಿದ್ದೀರಿ, ಸಾಮಾನ್ಯವಾಗಿ ಉಪವಾಸ ಆರೋಗ್ಯಕ್ಕೆ ಒಳ್ಳೆಯದು ಆದರೆ ನೀರಿನ ಉಪವಾಸ ಬೇಡವೇ ಎಂದು ಖಚಿತವಿಲ್ಲ ಆದರೆ ಶಿವರಾತ್ರಿಯಂದು ಭಜನೆ, ಧ್ಯಾನ ಮಾಡುವುದು ತುಂಬಾ ಒಳ್ಳೆಯದು, ಮತ್ತು ಅದು ಹಲವು ಬಾರಿ ಮಾಡುವುದಕ್ಕೆ ಸಮ. ಯಾವುದೇ ಹಬ್ಬವು ಸ್ನೇಹಿತರನ್ನು ಮತ್ತು ಸಂಬಂಧಿಕರನ್ನು ಭೇಟಿ ಮಾಡಲು ಒಳ್ಳೆಯ ಸಮಯ.

Mamta Rivonkar said...

ಅವು ಮುಗ್ಧ ಪ್ರಶ್ನೆಗಳಲ್ಲ .. ಪ್ರಬುದ್ದ ಪ್ರಶ್ನೆಗಳು. ಬಾಲ್ಯದಲ್ಲಿ ನಾವು ಈ ರೀತಿ ಪ್ರಶ್ನೆಗಳನ್ನ ಕೇಳಿ ಥೂ ಅಂತ ಉಗಿಸಿಕೊಂಡಿದ್ದ ನೆನೆಪು 😆