Tuesday, March 3, 2026

ಶ್ರೀ - ಅಪ್ಪಿ ಕಥಾ ಪ್ರಸಂಗ ೩

ನಲವತ್ತು ದಾಟಿದ ಮೇಲೆ ಶ್ರೀಯ ಮುಖದ ಮೇಲೆ, ಗಲ್ಲ ಮತ್ತು ಹಣೆಯ ನಡುವಿನ ಜಾಗದಲ್ಲಿ ಕಪ್ಪು ಛಾಯೆ ಗಮನಿಸಿದ ಅಪ್ಪಿ, ಅವನಿಗೆ ದಿನವೂ ಸಂಜೆ ಹತ್ತಿರವಿರುವ park ಗೆ walking ಕರೆದುಕೊಂಡು ಹೋಗಲು ಪ್ರಾರಂಭಿಸಿ ಇವತ್ತಿಗೆ ಸರಿಸುಮಾರು ಅರ್ಧ ವರ್ಷವಾಗಿದೆ . ಶ್ರೀ ಹೆಂಡತಿ ಶಾರದಾಗೆ ಅಪ್ಪಿ ಹಲವು ಸಲಹೆಗಳನ್ನಿತ್ತು, ಅವನಿಗೆ diabetic ಬರುವ ಎಚ್ಚರಿಕೆ ಕೊಟ್ಟು ಅಡುಗೆಯಲ್ಲಿ ಏನು ಮಾರ್ಪಾಡು ಮಾಡಿದರೆ ಒಳ್ಳೆಯದು, ಸೋಂಬೇರಿ ಶ್ರೀ ನೀರು ಕುಡಿಯುವುದನ್ನ ಹೆಚ್ಚಿಗೆ ಮಾಡಲು ಮನೆಯಲ್ಲಿ ಶಾರದಾ, ಆಫೀಸ್ ಅಲ್ಲಿ ಅಪ್ಪಿ ಎಡಬಿಡದೆ ಒದ್ದಾಡಿದ್ದು ಅವರಿಬ್ಬರಿಗೆ ಮಾತ್ರ ಗೊತ್ತು. 

ಆರು ತಿಂಗಳವಾಯಿತು ಅಪ್ಪಿ ಒಂದೂ ದಿನ ತಪ್ಪಿಸದೇ ಆರು ಘಂಟೆಗೆ ಬಂದು ಶ್ರೀಯ ಎಲ್ಲಾ ನಾಟಕ ನಖರಾ ಸಹಿಸಿಕೊಂಡು ವಾಕಿಂಗ್ ಗೆ ಕರೆದೊಯ್ಯುತ್ತಾನೆ. ಪಾರ್ಕ್ ನಲ್ಲಿ ಅರ್ಧ ತಾಸು ಮೆಲ್ಲಗೆ ನಡೆಯುತ್ತಾ, ಇನ್ನೊಂದು ಘಂಟಿ ಅವರಿವರನ್ನ ಮಾತನಾಡಿಸಿಕೊಂಡು, ಉಪದೇಶಿಸಿ , ತನ್ನನ್ನು ತಾನೇ ಹೊಗಳುತ್ತಾ ಕೂರುವುದು ಶ್ರೀಯ ದಿನಚರಿ. 

ಇಂದು ಅರ್ಧ ಘಂಟೆ ನಡೆದಾಡಿದ ಮೇಲೆ, ಅಲ್ಲೇ ಹುಲ್ಲು ಹಾಸಿಗೆಯ ಮೇಲೆ ಕಾಲು ಚಾಚಿ, ಕೈಗಳನ್ನು ಬೆನ್ನ ಹಿಂದೆ ಊರಿ ಕುಳಿತ ಶ್ರೀಗೆ ಮುಸ್ತಾಫಾ ಕೂಡ ವಾಕ್ ಮಾಡುತ್ತಿರೋದು ಕಾಣಿಸಿತು.

"ಮುಸ್ತಪ್ಪ, ಏನು ಈ ಕಡೆ ? ವಾಕ್ ಮಾಡಲು ಬಂದಿರುವ ಹಾಗಿದೆ, ಇವನ್ಯಾರೋ ಜೊತೆಯಲ್ಲಿ?".

"ಶ್ರೀ ಬಯ್ಯಾ, ಇವ ನನ್ನ ಮಗ ರಹಮತ್. ಪಾರ್ಕ್ ಗೆ ವಾಕ್ ಮಾಡಲು ಬರದೇ ಎಂತ ಅಜ್ಜಿಯ ಕೂದಲು ಹುಡುಕಲು ಬರುತ್ತಾರೆಯೇ?".

"ಮುಸ್ತಪ್ಪ, ಯಾಕೋ ಗಲಿಬಿಲಿ ಅಲ್ಲಿ ಇದ್ದಹಾಗಿದೆ. ಆರಾಮಾಗಿ ಒಂದೆರೆಡು ರೌಂಡ್ ವಾಕ್ ಮಾಡಿ ಬಾ, ಮಾತನಾಡುವ."

"ಗಲಿಬಿಲಿ ಎಂತ ಇಲ್ಲ ಮಾರಾಯ.ಇವನದ್ದು ಒಂದೇ ಪಿರಿಪಿರಿ. ಮದುವೆಯಾಗಿ ಒಂದು ವರ್ಷವಾದರೂ ಇನ್ನೂ ತೊಟ್ಟಿಲು ತೂಗಲಾಗಲಿಲ್ಲ ಇವನಿಗೆ.ಕೇಳಿದರೆ ಇನ್ನೂ ಮೂರು ನಾಲ್ಕು ವರ್ಷದವರೆಗೂ ಮಗು ಬೇಡವಂತೆ, ಇದಕ್ಕೇನು ಹೇಳುತ್ತೀಯಾ ". 

"ಓಹೋ, ಹಾಗೇನು, ಈಗಿನ ಕಾಲದ ಹುಡುಗರು ತುಂಬ ಹುಷಾರು, ನಾನು ಅವನ ಜೊತೆ ಮಾತನಾಡಬಹುದೇ? ಹೌದಾದರೆ, ನೀನು ವಾಕ್ ಮುಗಿಸಿ ಬಾ, ಅಷ್ಟರೊಳಗೆ ನಾನು ಇವನ ಜೊತೆ ಉಭಯ ಪರಿಚಯ ಮಾಡಿಕೊಳ್ಳುತ್ತೇನೆ".

"ಅದು ಆದೀತು, ನಿನ್ನ ಮಾತು ಕೇಳಿ ಇವನ ಮನ ಪರಿವರ್ತನೆ ಆಗುವುದಾದರೆ ಅಡ್ಡಿಯಿಲ್ಲ."

"ಪ್ರಯತ್ನ ಮಾಡುತ್ತೇನೆ, ನೀನು ಮೂಗು ತೂರಿಸದಿದ್ದರೆ ಅದೇ ದೊಡ್ಡ ಉಪಕಾರ".

"ಇನ್ಷಾ ಅಲ್ಲಾಹ " ಎಂದು ಮುಸ್ತಫಾ ರೆಹಮಾನ ಅನ್ನು ಶ್ರೀ ಹಾಗೂ ಅಪ್ಪಿ, ಬ್ಯಾಂಕ್ ಅಲ್ಲಿ ನೌಕರರು ಮತ್ತು ಲೋಕ ತಿಳಿದವರು ಇಂದು ಅವನ ಭಾಷೆಯಲ್ಲಿ ಹೇಳಿ ಅವರ ಜೊತೆ ಸಮಾಲೋಚಿಸುವಂತೆ ಆಜ್ಞೆ ಮಾಡಿ walking ಶುರು ಮಾಡಿದ.

"ರೆಹಮಾನ್, ಏನು ಮಾಡ್ಕೊಂಡಿದಿಯ, ಹೆಂಡತಿ ಸೌಖ್ಯವೇ ?".

"Hi uncle, ನಾನು Tech ಮಹೀಂದ್ರ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದೇನೆ. ಹೆಂಡತಿ ಕೂಡ TCS ಅಲ್ಲಿ software engineer. ಎಲ್ಲಾ ಆರಾಮು uncle".

" ಏನಾದರೂ ತೊಡಕಿದೆಯ? ಯಾಕೆ ನಿನಗೆ ಅಥವಾ ಅವಳಿಗೆ ಮಗುವಾಗುವುದು ಇಷ್ಟವಿಲ್ಲವಾ ?".

" ಅಯ್ಯೋ uncle, ನನಗೆ ಮತ್ತೆ ಅವಳಿಗೆ ಮಕ್ಕಳೆಂದರೆ ಬಲು ಪ್ರೀತಿ. ಆದರೆ ನಮ್ಮ ಸ್ನೇಹಿತರು ಮಕ್ಕಳ fees ಬಗ್ಗೆ ಕೇಳಿ ನಮಗೆ ಸ್ವಲ್ಪ ಹೆದರಿಕೆ ಇದೆ ಹಾಗಾಗಿ ಸ್ವಲ್ಪ ಹಿಂಜರಿಯುತ್ತಿದ್ದೇವೆ ಅಷ್ಟೇ."

"ಓಹ್ ಅಷ್ಟೇನಾ, ನಿನ್ನ ಮಗುವಿನ ಸ್ಕೂಲ್ ಫೀಸ್ free ಆದರೆ ನಿನಗೆ ಸಾಕಲ್ಲವೇ ಹಾಗಿದ್ದರೆ ?".

"ನೀವು ಅಬ್ಬು ಗೆ fee ಪಾವತಿಸಲು ಹೇಳುತ್ತಿರೇನೋ, ಆದರೆ ನಮಗೆ ಅದು ಸ್ವಲ್ಪವೂ ಇಷ್ಟವಾಗದ ಸಂಗತಿ, ಅದಲ್ಲದೆ ಒಂದೆರೆಡು ವರ್ಷ ಅವರು ಪಾವತಿಸಬಹುದೇನೋ, ಅದಾದಮೇಲೆ ನಾವಲ್ಲವೇ ನೋಡಬೇಕು ?".

"ನಾನು ಬ್ಯಾಂಕ್ ಅಲ್ಲಿ ಮ್ಯಾನೇಜರ್, ನನಗೆ ಅದಕ್ಕಿಂತ ಒಳ್ಳೆಯ ಸಲಹೆ ಗೊತ್ತು ಮಾರಾಯ, ನೀನು ಹೇಳು fees ಮಾತ್ರವೇ ನಿನ್ನ ಸಮಸ್ಯೆ ಅಲ್ಲವಾ?". 

"ಹೌದು ಶ್ರೀ uncle, ಈಗ ಸದ್ಯಕ್ಕೆ ಅದೇ ದೊಡ್ಡ ಸಮಸ್ಯೆ ನಮಗೆ".

" ಹಾಗಾದರೆ ಶ್ರೀಗೆ ಇದು ಸರಳ ತುತ್ತು" ಎಂದು ಶ್ರೀ ಪಕ್ಕದಲ್ಲೇ ಕೂತ ಅಪ್ಪಿ, ರೆಹಮಾನ್ ಗೆ ಕೂರುವಂತೆ ಸಲಹೆ ನೀಡಿದ. 

"ನೋಡು, ಈಗ ನೀವು ಸ್ವಲ್ಪ ಮುನ್ನೆಚ್ಚರಿಕೆ ವಹಿಸಿ ಸರಿಯಾಗಿ ಯೋಜನೆ ಮಾಡಿದರೆ ನಿನ್ನ ಮಗುವಿನ ಸ್ಕೂಲ್ ಫೀಸ್ free ಆದೀತು, ಅದಕ್ಕೆ ನನ್ನ ಬಳಿ ಸರಳವಾದ ಯೋಜನೆ ಇದೆ, ಇದರಲ್ಲಿ ನಿನ್ನ ತಲೆ ಕೆಡಿಸಿಕೊಳ್ಳುವಂಥದ್ದು ಏನೂ ಇಲ್ಲ."

"ಸರಿ uncle, ಹೇಳಿ. "

"ಈಗಿನ ಆರ್ಥಿಕ ವ್ಯವಸ್ಥೆಯಲ್ಲಿ ಸರಿಸುಮಾರು ಒಂದೂ ವರೆ ಎರೆಡು ಲಕ್ಷದವರೆಗೂ ವಾರ್ಷಿಕ fees ಇದೆ ಬೆಂಗಳೂರಲ್ಲಿ ಪ್ರತಿ ವರ್ಷಕ್ಕೆ. ಹೌದಲ್ಲವೇ?".

"ಹಾ uncle, ನನ್ನ ಗೆಳೆಯರ ಪ್ರಕಾರ ಹೆಚ್ಚು ಕಡಿಮೆ ಅಷ್ಟೇ ಆಗುತ್ತದೆ."

" ಹಾಗಾದರೆ ಕೇಳಿಸಿಕೊ, ನಿನಗೆ ಸುಮಾರು ಐದರಿಂದ ಆರು ವರ್ಷದ ಸಮಯ ಇದೆ, ಅದು ತುಂಬಾ ಒಳ್ಳೆಯದು ಕೂಡ".

"ಅರ್ಥವಾಗಲಿಲ್ಲ uncle".

"ನೋಡು ಈಗ ನಿನಗೆ ಒಂದು ವರ್ಷವಾದರೂ ಬೇಕಲ್ಲವೇ ಮಗುವಾಗಲು ".

" ಹೌದು, ಆದರೆ ನಮ್ಮ ಪ್ಲಾನ್ ಇರೋದು ಇನ್ನೂ ಮೂರು ವರ್ಷ ಕಾಯೋಣ ಅಂತ".

" ಅಲ್ಲಿಗೇ ಬರುತ್ತಿದ್ದೇನೆ ಮಾರಾಯ, ಸ್ವಲ್ಪ ತಾಳ್ಮೆ. ನಿನಗೆ ವರ್ಷದಲ್ಲಿ ಹೆಚ್ಚು ಕಮ್ಮಿ 3-4 ಲಕ್ಷದವರೆಗೂ ಉಳಿತಾಯ ಮಾಡಬಹುದಲ್ಲವೇ ಇಬ್ಬರೂ ಸೇರಿ?"

"ಹಾಂ ಅಂಕಲ್, ಸ್ವಲ್ಪ ಪ್ರಯತ್ನ ಪಟ್ಟರೆ ಆದೀತು, ಯಾಕೆ uncle?" .

"ಮೊದಲ ವರ್ಷ 4 ಲಕ್ಷ fixed deposit ಇಟ್ಟರೆ ಆಯಿತು, ದೇವರ ಆಶೀರ್ವಾದವಿದ್ದರೆ ಅಷ್ಟರೊಳಗೆ ನಿನ್ನಪ್ಪ ಆಶಿಸಿದಂತೆ ನಿಮ್ಮ ಮನೆಯಲ್ಲಿ ತೊಟ್ಟಿಲು ತೂಗುವಂತಾದರೆ....".

"ಆದರೆ uncle, ಈ 4 ಲಕ್ಷ ಬರೀ ಎರೆಡು ವರ್ಷಕ್ಕಾದೀತು ಅಲ್ಲವೇ ?".

" ರಹಮತ್ ಗೆ ತಾಳ್ಮೆ ಕಮ್ಮಿ ಅನ್ನಿಸುತ್ತೆ. ಅದರ ಮರುವರ್ಷ ಅದರ ಬಡ್ಡಿ ಹಾಗೂ ನಿನ್ನ ಆ ವರ್ಷದ ಉಳಿತಾಯ 4 ಲಕ್ಷ".

"ಇದು ಚೆನ್ನಾಗಿದೆ ಆದರೆ uncle ".

"ತಡಕೋ ಪಾ, ಮಗು ದೊಡ್ಡವನಾಗಿ ಐದು ವರ್ಷವಾಗಿ ಶಾಲೆಗೆ ಹೋಗುವಷ್ಟರಲ್ಲಿ , ಪ್ರತಿ ವರ್ಷದ ಬಡ್ಡಿ ಹಾಗೂ ಆ ವರ್ಷದ ಅಸಲು 4-5 ಲಕ್ಷ ಸೇರಿಸಿ ಸರಿ ಸುಮಾರು 28-30 ಲಕ್ಷವಾಗಿರುತ್ತೆ ".

"Uncle, ಆದರೆ .... ".

"ಇನ್ನೂ ಮುಗಿದಿಲ್ಲ, ಹಾಗೆ ಕೂಡಿಕರಿಸಿದ ಒಟ್ಟು ಮೊತ್ತವನ್ನ ಅಸಲಿಟ್ಟು ಕೊಂಡು fixed deposit ತೆಗೆದರೆ ಮಾತ್ರ ಸಾಕು, ಪ್ರತೀ ವರ್ಷ ಅವನ ಸ್ಕೂಲ್ ಫೀಸ್ cover ಆಗುತ್ತೆ ". 

" ಆದರೆ ಶ್ರೀ uncle .... ".

" ಇನ್ನೂ ಬಾಕಿ ಇದೆ, ವರ್ಷದ ಬಡ್ಡಿಯಲ್ಲಿ ನಿನ್ನ ಮಗುವಿನ ಸ್ಕೂಲ್ ಪಾವತಿಸಿ ಉಳಿಯುವ ಅಲ್ಪ ಸ್ವಲ್ಪ ಮೊತ್ತವನ್ನೂ ಕೂಡ ನೀನು ಆ  FD ಗೆ ಮರುಪಾವತಿಸಿದರೆ ಈ ಹಣದುಬ್ಬರದ ಪರಿಣಾಮ ಸ್ವಲ್ಪ ಕಮ್ಮಿ ಆಗಬಹುದು. ಹೀಗೆ ಶಾಲೆ ಎಲ್ಲಾ ಮುಗಿಸಿ ಬಂದ ನಿನ್ನ ಮಗನಿಗೆ ಕಾಲೇಜ್ ಬಂದಾಗ education loan ಮಾಡಿಕೊಡು. ಆದರೆ FD ಮುರಿಯಬೇಡ. ಅವನ ಕಾಲೇಜ್ ಮುಗಿಸುವಷ್ಟರಲ್ಲಿ  ಅದರ ಬಡ್ಡಿ, ಚಕ್ರ ಬಡ್ಡಿ ಎಲ್ಲ ಸೇರಿ ಒಟ್ಟೂ ಮೊತ್ತವನ್ನು ಆ loan ಗೆ ಬಳಸು, ಅವನ ಹೊರೆ ಕಮ್ಮಿ ಮಾಡು".

"ಆದರೆ uncle, ನಿಮ್ಮ ಯೋಜನೆ ಸರಿಯಾಗಿದೆ. ನಾವು ಬ್ಯಾಂಕ್ ಅಲ್ಲಿ ಹಣ ಪಾವತಿಸಲು, ಅದರ ಬಡ್ಡಿ ಉಪಯೋಗಿಸಲು ಅಪ್ಪನಿಗೆ ಕೊಂಚವೂ ಇಷ್ಟವಿಲ್ಲ, ಅದು ಅವರ ಆಚಾರದ ವಿರುದ್ಧ".

"ಹಾಗಾದರೆ ನನ್ನ ಬಳಿ ಇನ್ನೊಂದು ಉಪಾಯವಿದೆ, ಮುಸ್ತಪ್ಪ  ಬರಲಿ ಅವನಿದ್ದಾಗ ಹೇಳಿದರೆ ಸರಿಯಾದೀತು." 

"ಶಾರದಾ ಮತ್ತೇ ನೀಲಾ, ಬಹುಶಃ ಕಾಯುತ್ತಿರಬಹುದು ನಮಗೋಸ್ಕರ, ಅವರಿಗೆ ಪೇಟೆಗೆ ಹೋಗುವುದಿತ್ತು, ಹೊರಡೋಣವೆ?" ಅಪ್ಪಿ ಸ್ವಲ್ಪ ಜೋರು ಧ್ವನಿಯಲ್ಲಿ ಕೇಳಿದ ಶ್ರೀಗೆ. 

"ಹೌದಾ, ಹಾಗಾದರೆ ಹೊರಡೋಣ ಮಾರಾಯ, ಚೂರು ಚಹಾ ಕುಡಿಯೋಣವಾ ?".

"ಅದೆಲ್ಲ ಬೇಡ, ಇವತ್ತು ಬರೀ ಹರಟೆ ಆಯಿತು, ಅಷ್ಟೊಂದು ವಾಕ್ ಕೂಡ ಮಾಡಿಲ್ಲ."

"ನಿನ್ನಂಥ ಒಬ್ಬ ಗೆಳೆಯನಿದ್ದರೆ ಶತ್ರುಗಳೇ ಬೇಡ ಮಾರಾಯ, ಛೇ ".

"Thanks uncle, ನಾನು ಅಪ್ಪನ ಹತ್ತಿರ ಈ ಪ್ರಸ್ತಾಪವನ್ನಿಡುತ್ತೇನೆ, ನೋಡುವ." ಅಂತ ಹೇಳಿ ರಹಮತ್ ಬೀಳ್ಕೊಟ್ಟ.

ಅವನು ಹೋಗುತ್ತಲೇ ಅಪ್ಪಿ ಶ್ರೀ ಗೆ "ಹೌದು , ನೀನೂ ಇದನ್ನೇ ಮಾಡಿದ್ಯಾ ".

"ಹೇಳುವುದಕ್ಕೂ, ಕೇಳುವುದಕ್ಕೂ ಇದು ಸಮಯವಲ್ಲ, ನೀನು ಚಾ ಕುಡಿಸುವರೆಗೂ ".

"ಶಕ್ಯವೇ ಇಲ್ಲ, ನನಗೆ ಶಾರದಾ ಅತ್ತಿಗೆಯನ್ನು ಕಾಯಿಸುವುದು ಇಷ್ಟವಿಲ್ಲ.ಬೇಗ ಹೊರಡುವ ಬಾ".


######### ಶುಭಂ ##########

ಇಂತಿ,

ಶ್ರೀ ಅಪ್ಪಿ.

Friday, February 27, 2026

ಶ್ರೀ - ಅಪ್ಪಿ ಕಥಾ ಪ್ರಸಂಗ ೨

 ಶ್ರೀ ಹಾಗೂ ಅಪ್ಪಿ ಕಾಲೇಜು ದಿನಗಳಿಂದ ಗೆಳೆಯರು. ಇಬ್ಬರಿಗೂ ಒಂದೇ ಕಂಪನಿಯಲ್ಲಿ ಕೆಲಸ ಸಿಕ್ಕಿದ್ದು ಆಕಸ್ಮಿಕವೇ ಸರಿ. ಕೆಲಸ ಮುಗಿದ ಮೇಲೆ ಇಬ್ಬರೂ ಒಂದೇ ಗಾಡಿಯಲ್ಲಿ ಕೂತು ಮನೆಗೆ ಹೋಗುವ ರೂಢಿ, ಇಬ್ಬರೂ ನೆರೆಹೊರೆ ಕೂಡಾ ಹೌದು. 

ಮದುವೆಯಾಗಿ, ಮಕ್ಕಳಾಗಿ, ಮಕ್ಕಳು ಶಾಲೆಗೆ ಹೋಗುವುದಕ್ಕೆ ಪ್ರಾರಂಭಿಸಿದರೂ ಇವರ ದಿನಚರಿಯಲ್ಲಿ ಒಂಚೂರು ಬದಲಾವಣೆಯಾಗಿದ್ದು ನಾ ಕಾಣೆ. ಇಬ್ಬರ ಮನೆ ದೋಸೆ ತೂತಾದರೂ, ಎಲ್ಲಿ ಎಷ್ಟು ತೂತುಗಳಿವೆ ಎಂದು ಪರಸ್ಪರರಿಗೆ ಗೊತ್ತಾಗುವಷ್ಟು ಗಾಢ ಗೆಳೆತನ ಇವರದ್ದು. ಎಲ್ಲವೂ ಸರಿ ಆದರೆ ಶ್ರೀ ಪಕ್ಕಾ ನಾಸ್ತಿಕ, ಅಪ್ಪಿ ಹೇಳಿಕೊಳ್ಳುವಂಥ ಅಸ್ಥಿಕನಲ್ಲದಿದ್ದರೂ, ಸಂಕಟ ಬಂದಾಗ ವೆಂಕಟರಮಣ ಅನ್ನುವಷ್ಟಾದರೂ ಭಕ್ತಿ ಇದೆ. ಭಕ್ತಿಗಿಂತ ಭಯವೇ ಜಾಸ್ತಿ ಅನ್ನಿ.

ಎಂದಿನಂತೆ ಅಂದು ಸಂಜೆ ಕಂಪನಿಯ ಕೆಲಸ ಮುಗಿಸಿ ಅವರ ಮಾಮೂಲಿ ಚಹಾ ಅಂಗಡಿಯಲ್ಲಿ ಬಿಸಿ ಬಿಸಿ ಬಾದಾಮಿ ಹಾಲು, ಒಂದು ಉಸ್ಮಾನಿಯಾ ಬಿಸ್ಕೆಟ್ ಸವಿಯುತ್ತಿರುವಾಗ ಅಪ್ಪಿಯ ಮುಖ ಸಪ್ಪಗಿರುವುದನ್ನ ಕಂಡ ಶ್ರೀ "ಯಾಕಲೇ, ಏನಾತು." ಎಂದು ಕೇಳಿದ.

"ನಾಳೆ ಮಹಾಶಿವರಾತ್ರಿ".

"ಅದಕ್ಕ?".

"ಬೆಳಿಗ್ಗೆ ನೀಲಾ ಹೇಳ್ತಿದ್ಲು, ಬರೋಮುಂದ ಒಂದು ಕಲ್ಲಂಗಡಿ ಹಣ್ಣು, ಒಂದು ಕರಬೂಜ, ಒಂದು ಡಜನ್ ಬಾಳೆ ಹಣ್ಣು, ಕಬ್ಬು, ಕೋಬರಿ, ದ್ರಾಕ್ಷಿ ಹಣ್ಣು, ತೆಳ್ಳಗಿನ ಅವಲಕ್ಕಿ, ಉಪ್ಪಿಟ್ಟು ರವಾ ಎಲ್ಲಾ ತೊಗೊಂಬರ್ರಿ, ನಾಳೆ ಎಲ್ಲಾರೂ ಉಪವಾಸ ಮಾಡೋದದ  ಅಂತ".

"ಅಷ್ಟ ಹೌದಲ್ಲ, ನೀನ್ ಹೆಂಡ್ತಿ ಹೇಳ್ಯಾಳ ಅಂದ್ರ ತೊಗೊಂಡು ಹೋಗು, ಗಾಡಿನ ರಸವಂತೀ ಹಣ್ಣಿನ ಅಂಗಡಿ ಹತ್ರ ನಿಲ್ಲಸ್ತೇನಿ".

"ಅದು ಮಾಡಿದ್ರಾಯ್ತು, ನನ್ನ ಮಗ ಉಡಾಳ ಗಿರಿ, ಅಪ್ಪ ಉಪವಾಸ ಯಾಕ ಮಾಡಬೇಕು ಶಿವರಾತ್ರಿ ಗೆ ಅಂತ ಕೇಳಿದ".

"ಶಬ್ಭಾಷ್, I like this "ಯಾಕ" questioning mindset".

"ಈಗ ಆಫೀಸ್ ಗೆ ಲೇಟ್ ಆಗ್ಲಿಕತ್ತದ , ಬಂದು ಹೇಳ್ತೀನಿ" ಅಂದು ಹೆಂಗೋ ತಪ್ಪಿಸಿಕೊಂಡೆ.

"ಮುಂದ".

"ಮುಂದ ಅಂದ್ರ ಎನ್ಲೆ, ಈಗ ಹೋದ್ರ ಸಾವಿರ questions ಇರ್ತಾವು ಅವಂದು, ಅವಂಗೆ answers ಹೇಳಿದ ಮ್ಯಾಲೆ ಅವಾ ನನ್ನ ಬಿಡೋದು, ಜೀವಂತ".

"ಹೌದು, ಯಾಕ ಉಪವಾಸ ಅಂತ ಒಂದು concept ಅದ ನಮಗ?".

"ಯಾಕಂದ್ರ, ಶಿವರಾತ್ರಿಗೆ ಅಷ್ಟ ಅಲ್ಲ, ಸಂಕಷ್ಟಿ, ಏಕಾದಶಿ, ಚತುಷ್ಟಿ ಅಂತ ಬಾಳ ದಿನಾ ಉಪವಾಸ ಇರ್ತೇವಿ. ದಿನಾ ಗಂಟಲು ಪೂರ್ತಿ ಮೂರು ಹೊತ್ತು ತಿಂದು ನಮ್ಮ ಜೀರ್ಣಾಂಗ ವ್ಯವಸ್ಥೆ ಹದಗೆಟ್ಟಿರ್ಥತಿ, ಅದಕ್ಕ ಸ್ವಲ್ಪರ ಅವಾಗಾವಾಗ ವಿಶ್ರಾಂತಿ ಸಿಗಲಿ ಅಂತ ಮಾಡಿರ್ತಾರ ಹಿರಿಯರು ".

" ಹಂಗಾದ್ರ, ಆರೋಗ್ಯದ ದೃಷ್ಟಿಯಿಂದ ಉಪವಾಸ ಮಾಡ್ಯಾರ ಅಂತಿ?". 

"ಶಿವನಿಗೆ ಈ ಆಡಂಬರ, ವೈಭವ ಎಲ್ಲಾ ಹಿಡ್ಸಂಗಿಲ್ಲ. ಎಲ್ಲಾ ಬಿಟ್ಟು ಬೂದಿ ಬಳಕೊಂಡು ಸ್ಮಶಾನದೊಳಾಗ ಇರೋ ದೇವರಿಗೆ ಒಂದು ದಿನ ಉಪವಾಸ ಇರೋದು ತಪ್ಪಲ್ಲ ಅಲ್ವಾ? ಅಷ್ಟ ಅಲ್ಲಪಾ, ಶಿವರಾತ್ರಿಯ ರಾತ್ರಿ ಬ್ರಹ್ಮಾಂಡದಲ್ಲಿ ಶಕ್ತಿಯ ಪ್ರವಾಹ ಉಚ್ಛ ಮಟ್ಟಕ್ಕೆ ಏರಿರುತ್ತ, ನಾವು ದ್ಯಾನದಲ್ಲಿದ್ರೆ ನಮ್ಮೊಳಗಿನ ಆಧ್ಯಾತ್ಮಿಕ ಮನಸ್ಸಿಗೆ ಆ ಶಕ್ತಿಯ ಪ್ರಭಾವದ ಅನುಭವ ಆಗ್ತದ ಅಂತ ನಮ್ಮಜ್ಜ ಹೇಳಿದ ನೆನಪು ನಾವು ಸಣ್ಣೋರಿರೋಬೇಕಿದ್ರ".

"So, ಶಿವ ಎಲ್ಲಾ ತ್ಯಜಿಸಾನ ಅಂತ ನೀ ಊಟ ಮಾಡದಂಗ ಉಪವಾಸ ಮಾಡೋದು, ನಿದ್ದಿ ಮಾಡಲಾರದ ಜಾಗರಣಿ ಮಾಡೋದು?".

"ಅಷ್ಟ ಅಲ್ಲೇನು?".

" ಮುಸ್ತಫಾ ರೋಜಾ ಮಾಡೋದು, ದೇವಾಲೋಗನಾಥನ್ ಈಸ್ಟರ್ ಗೆ Lent period ಅಂತ ಮಾಡೋದು, ಅದು ಏನು ?".

"ಅದು ಅವರಿಗೆ ಗೊತ್ತಿರುತ್ತ, ನಂಗ ಕೇಳಿದ್ರ ನಾ ಎನ್ ಹೇಳ್ಲಿ?".

" ಯಾವ ದೇವ್ರು ಉಪವಾಸ ಮಾಡ್ರಿ, ಕುರಿ ಕೋಳಿನ ಕಡಿರಿ, ಬರೀ ಅವಲಕ್ಕಿ ಉಪ್ಪಿಟ್ಟು, ಸಾಭುದಾನ ವಡಿ ತಿಂದು ದಿನಾ ಎಲ್ಲಾ ಕಳಿರಿ  ಅಂತ ಹೇಳಿಲ್ಲಲ್ಲಾ?".

" ಹೋಗಿ ಹೋಗಿ ನೀನ್ ಹತ್ರ ದೇವ್ರು, ಹಬ್ಬ ಅಂತ ಹೇಳಿದ್ನಲ್ಲ, ನಂಗ ಬುದ್ದಿ ಇಲ್ಲಾ ಬಿಡು. ನೀ ಒಬ್ಬ ನಾಸ್ತಿಕ ಅಂತ ಮತ್ತ prove ಮಾಡಿದಿ ನೋಡು ಇವತ್ತು. ಹಂಗಾರ ಈ ದಿನ ಯಾಕ ಉಪವಾಸ ಮಾಡಬೇಕು ಅಂತೀರಿ ಶ್ರೀಮಾನ್ ಶ್ರೀ ಅವರೇ".

"ನಂಗೂ ಗೊತ್ತಿಲ್ಲಾ, ಆದ್ರ ಏನಿರ್ಬಹುದು ಅನ್ನೋ ಕುತೂಹಲ ಐತಿ, thanks to your son Giri."

"ನಮಗ ಊಟದ ಬೆಲೆ ಗೊತ್ತಾಗಲಿ ಅಂತ ಏನಾದ್ರೂ ನಮ್ಮ ಹಿರಿಯರು ಈ ಆಚರಣೆ ಜಾರಿಗೆ ಮಾಡಿದ್ರಾ ?".

"ನನಗನ್ನಿಸೋದು, ಹಸಿವಿನ ಅನುಭವ ಆಗಲಿ ಎಲ್ಲಾರಿಗೂ ಅಂತ ".

"ಹಸಿವಿನ ಅನುಭವ ಎಲ್ಲಾರಿಗೂ ಒಂದಲ್ಲಾ ಒಂದು ಹೊತ್ತಲ್ಲಿ ಆಗಿರ್ತದ, ಅಲ್ಲಾ?".

"ಒಂದು ದಿನ ಪೂರ್ತಿ ಉಪವಾಸ ಇದ್ದು, ಒಂದು ರಾತ್ರಿ ಇಡೀ ನಿದ್ದಿಗೆಟ್ರ ಏನೆಲ್ಲಾ ಆಗ್ತದ, ನಮ್ಮ ವಿಚಾರಗಳು ಎಷ್ಟು ಬದಲಾಗ್ತವ, ನಮ್ಮ ದಿನಚರಿ ಎಷ್ಟೆಲ್ಲ ಪರಿಣಾಮ ಆಗ್ತದ ಅಂತ ".

" ಹಂಗ ಮಾಡಿದ್ರ ನಮಗೇನು ಬಂತು ಲಾಭ ?".

"ಹಂಗ ಮಾಡಿದ್ರ ನಂಗ ಅನ್ನಿಸೋದು ನಮ್ಮ ಅನುಭವಕ್ಕ ಬರ್ತದ ಈ ಊಟದ ಮತ್ತು ನಿದ್ದಿಯ ಮಹತ್ವ. ಯಾರು ಊಟ ಇಲ್ದಂಗ ಇರ್ತಾರಲ್ಲ ಅವರಿಗೆ ನಾವು ಮನಸಾಪೂರ್ವಕ ಧಾನ ಮಾಡ್ತೇವಿ. ದಯೆಯಿಂದ ಧಾನ ಮಾಡ್ತೇವಿ".

"ಇದು ಯಾಕೋ ಅಸಮಂಜಸ ಅನ್ನಿಸ್ತದ, ಅಲ್ಲೋ ದೋಸ್ತ, ಧಾನ ಮಾಡ್ಲಿಕ್ಕೆ ಉಪವಾಸ ಇರಲಿಕ್ಕೆ ಬೇಕೇನು? ಉಪವಾಸ ಇಲ್ದಂಗ ಇನ್ನೊಬ್ಬನಿಗೆ ಊಟ ಹಾಕಿದ್ರ ಅದು ಅವನ ಹೊಟ್ಟಿ ತುಂಬಸಂಗಿಲ್ಲ?".

"ಧಾನ ಅನ್ನೋದು ಅವನಿಗೆ ಒಳ್ಳೆದಾಗಲಿ ಅಂತ ಮಾಡ್ತಾರೇನೋ ಹುಚ್ಚಪ್ಪ, ಅದು  ಧಾನಿಗೂ ಒಳ್ಳೆದು ಮಾಡೋದು. ಆ ಧಾನಿಗೆ, ನಾ ಧಾನ ಮಾಡಿದ್ನಲ್ಲ ಅನ್ನೋ ಅಹಂ ಅವನಿಗೆ ಬರದಂಗಿರಲಿ, ಅವನ ಮನಸ್ಸಿನೊಳಗ ದಯೆ ತುಂಬಿಕೊಂಡಿರಲಿ ಅಂತ ಹಿರಿಯರು ಇಂಥಾ ಒಂದು ಆಚರಣೆ ಮಾಡಿರಬಹುದು, ಅಷ್ಟಿಲ್ದ ಹೇಳ್ಯಾರೇನು ಬಸವಣ್ಣೋರು, ದಯೆಯೇ ಧರ್ಮದ ಮೂಲವಯ್ಯ, ದಯೆ ಬೇಕು ಸಕಲ ... ".

" ಹೇ, ಹೇ ಹೇ, ದೋಸ್ತ ನಿಲ್ಲಿಸು. ಸೂರ್ಯ ಆಗಲೇ ಮುಳುಗ್ಲಿಕತ್ತಾ, ನನ್ನ ಹೆಂಡ್ತಿ ಹೇಳಿದ್ದೆಲ್ಲ ತೊಗೊಂಡು ಹೋಗಬೇಕು, ಇಲ್ಲಾಂದ್ರ ನನ್ನ ಚಂಡ ತಗಿತ್ತಾಳಕಿ . ನನ್ನ ಮಗನಿಗೆ ನಾ ಬೇಟೆಗಾರ ಬಿಲ್ವ ಮರ ಹತ್ತಿ ಆ ದಿನ ಉಪವಾಸ ಇದ್ದು, ರಾತ್ರಿ ಪೂರ್ತಿ ಜಾಗರಣಿ ಮಾಡಿ, ಬಿಲ್ವ ಎಲೆಗಳನ್ನ ಒಂದೊಂದ ಕಿತ್ಕೊಂತ ಕೆಳಗ ಹಾಕಿದ್ದು, ಅವೆಲ್ಲ ಮರದ ಕೆಳಗಿದ್ದ ಶಿವಲಿಂಗದ ಮೇಲೆ ಬಿದ್ದು ಶಿವ ಪ್ರಸನ್ನ ಆಗಿ ಆ ಬೇಟೆಗಾರ ಮೋಕ್ಷ ಪಡೆದ ಕಥೆ ಹೇಳ್ತೀನಿ ನಡಿಪಾ. ನೀ ಹೇಳಿದ್ದೆಲ್ಲ ಕೇಳಿ ನನ್ ತಲಿ ಮೊಸರು ಗಡಿಗಿ ಆಗೇತಿ ".

############ ಶುಭಂ #############.

ಇಂತಿ,

ಶ್ರೀಅಪ್ಪಿ.


ಕಥೆಯ ಹಿನ್ನಲೆ: 

https://naanoo-mama.blogspot.com/2026/02/blog-post.html

https://naanoo-mama.blogspot.com/2025/10/blog-post.html




Sunday, February 15, 2026

ನಾನೋ, ನನ್ನ ಉಪವಾಸವೋ

 "ಈ ಶಿವರಾತ್ರಿ ಅಂದ್ರ ಏನು? ಈ ಹಬ್ಬದ ವಿಶೇಷತೆ ಏನು ? ನಮ್ಮ ಯಾವ ಹಬ್ಬಗೋಳಾಗ ರಾತ್ರಿ ಅಂಥ ಪದಾನೇ ಬರಂಗಿಲ್ಲ ಅಲ್ವಾ" ಮಗ ಕೇಳಿದ ಪ್ರಶ್ನೆಗೆ ನನ್ನ ಹತ್ತಿರ ಉತ್ತರ ಹುಡುಕೋ ಉದ್ವೇಗಕ್ಕಿಂತ ಇಂಥ ಪ್ರಶ್ನೆ ಕೇಳಿದನಲ್ಲ ಅನ್ನೋ ಹೆಮ್ಮೆ ಆಯ್ತು ನನಗೆ.

"ಶಿವರಾತ್ರಿ ಅಂದ್ರೆ ಶಿವನ ಹಬ್ಬ, ಶಿವಾ ಪಾರ್ವತಿ ಸಮಾಗಮದ, ಶಿವ ತಾಂಡವ ನೃತ್ಯ ಮಾಡಿದ, ಸಮುದ್ರ ಮಂಥನದಲ್ಲಿ ನಂಜನ್ನು ಕುಡಿದ ಶಿವನ ಆರಾಧನೆಯ ರಾತ್ರಿ. ಈ ದಿನಪೂರ್ತಿ ಫಲಾಹಾರ  ಸೇವಿಸಿ, ಉಪವಾಸ ಇದ್ದು, ರಾತ್ರಿಪೂರ್ತಿ ಶಿವನ ನಾಮಸ್ಮರಣೆ, ಭಜನೆಯಲ್ಲಿ ಜಾಗರಣೆ ಮಾಡ್ತೀವಿ" ನಂಗ ಗೊತ್ತಿರುವಷ್ಟು ಎಷ್ಟು ಸರಳ್ ಹೇಳ್ಲಿಕ್ಕೇ ಆಗ್ತದೋ ಹೇಳಿ ಮುಗಿಸಿದೆ.

"ಶಿವನ ಹುಟ್ಟುಹಬ್ಬಾನ, ಮತ್ತ ನೀ ಹೇಳೋಬೇಕಿದ್ರ ಶಿವಾ ಪರಮಾತ್ಮ, ದೈವಗಳ ದೇವ, ಅವರಿಗೆ ಹುಟ್ಟೂ ಇಲ್ಲಾ, ಸಾವೂ ಇಲ್ಲಾ...".  ನನ್ನ ಮಗನ ಪ್ರಶ್ನೆ ಪತ್ರಿಕೆ ಅಷ್ಟಕ್ಕ ಮುಗಿದಿದ್ರೆ ಅವನಿಗೆ ನಾ ಗಿರಿ ಅನ್ನೋ ಬದಲು ಅಕ್ಷಯಪಾತ್ರೆ ಅಂತಾ ಯಾಕ ಕರಿಬೇಕಿತ್ತು.

ಇನ್ನೂ ಏನೋ ಕೇಳ್ಬೇಕು ಅಂತಿದ್ದವನಿಗೆ ಸ್ನಾನ ಮಾಡ್ಕೊಂಬಾ ಅಂಥ ದಬಾಯಿಸಿ ಕಳಿಸಿದೆ, 

" ಅಪ್ಪ, ನಾ ಇವತ್ತ ಟಬ್ ನಾಗ ಸ್ನಾನ ಮಾಡಲಿ" . 

 " ಹೂಂ, ತಲಿ ಸ್ನಾನ ಮಾಡು, ಚೋಲತ್ನಾಗ ಶಾಂಪೂ ಹಚ್ಕೋ ".

 ಅವಾ ಕುಣಿದಾಡಿಕೊಂತ ಸ್ನಾನಕ್ಕ ಅಂಥ ಹೊಂಟ, ತಟ್ಟಂಥ ನಾ ChatGPT ಶರಣ ಹೋದೆ.ನನಗ ಗೊತ್ತು ನಾ ಹಾಕಿದ್ದು ಅಲ್ಪವಿರಾಮ, ಅವಾ ಸ್ನಾನ ಮಾಡಿ ಬಂದು ತಕ್ಷಣ ಅವನ ಪ್ರಶ್ನಾ ಉಗಿಬಂಡಿಗೆ ಮತ್ತ ಸ್ವಲ್ಪ ಇದ್ದಿಲು ಹಾಕ್ಕೊಂಡು ಬಂದು ನನ್ನ ಪಕ್ಕಾ ಕೂತ್ಕೊಳುತ್ತ ಅಂತ. ಇವತ್ತು ಶಿವ ಸ್ತುತಿ ಜಪಿಸೋ ಮೊದಲು ಇವನ ೧೦೦೮ ಕುತೂಹಲಗಳಿಗೆ ನಾನು ಉತ್ತರ ಪತ್ರಿಕೆ ready ಇಟ್ಕೋಬೇಕಿತ್ತು. 

ನನಗ ಇಷ್ಟ ಆಗೋ ಹಬ್ಬಗಳಲ್ಲಿ ಒಂದಾದ ಶಿವರಾತ್ರಿ ಬಗ್ಗೆ,ChatGPT, Google ಹುಡುಕಿ ನನ್ನ ಮಗನಿಗೆ answer ಮಾಡೋ ಅಷ್ಟು ಮಬ್ಬ ಆಗಿ ಬಿಟ್ಟೆ ನಾ. ಇದು ನಂಗ ಸ್ವಲ್ಪ ಖೇದ ಉಂಟು ಮಾಡ್ತು ಆದ್ರೂ ನಾ ಅದರ ಬಗ್ಗೆ ಸ್ವಲ್ಪ ಓದಿಕೊಂಡಿದ್ದು ಖರೇ. 

ಅವಾ ಸ್ನಾನ ಮುಗಿಸ್ಕೊಂಬಂದ, ನಾ ನಸಿಕನಾಗ ಎದ್ದು ಬೆಳಗಿನ ಕೆಲಸ ಎಲ್ಲಾ ಮುಗಿಸಿ ಬಿಸಿ ಬಿಸಿ ನೀರೊಳಗ ಸ್ನಾನ ಮಾಡಿ ಬೆಳಗ್ಗಿನ ಉಗುರುಬೆಚ್ಚಗಿನ ನೀರು ಕುಡುಕೊಂತ ಕುಂತಿದ್ದೆ. ಗಿರಿ ಎದ್ದು ಬಂದು ಇಷ್ಟೆಲ್ಲ ಗಬರಾಡಿಸಿ ಹೋಗಿದ್ದ . ೧೦೦೮ ಶಿವ ಸ್ತುತಿ ಮುಗಿಸಿ ಪೂಜೆ ಮಾಡಿ ಎದ್ದೇಳಲಿಕ್ಕೆ ಸ್ವಲ್ಪ ಸಮಯ ಆಗಿತ್ತಾದರೂ ಗಿರಿ ಹಣೆ ಮೇಲೆ ಒಂದು ಪ್ರಶ್ನೆ ಚಿನ್ಹೆ ಕಾಣಿಸಿ "ಯಾಕ, ಏನಾಯ್ತು" ಅಂದೆ.

""ಓಂ ಅಮುಖಾಯೆ ನಮಃ" ಅಂದ್ಯಲ್ಲ, ಅದರ ಅರ್ಥ ಏನು?"

"ಆಗ್ದಿ ಸರಳ್ ಕನ್ನಡ ಅಲ್ಲೇನೋ, ಮುಖಾ ಇಲ್ದಾವ, faceless".

"ಮತ್ತ ಇಷ್ಟೊತ್ತನ್ನಕ ಶಿವನ  ಫೋಟೋ ಇಟ್ಕೊಂಡು ಪೂಜೆ ಮಾಡದಿ, ಬಿಲ್ಪತ್ರಿ ಹಾಕಿದೀ".

"ಗಿರಿ, ಇವತ್ತು, ಮೊದಲ ಉಪವಾಸ, ಆಮೇಲೆ ಜಾಗರಣಿ ಬೇರೆ, ನಾಳೆ ನೀನವು ಎಲ್ಲಾ queations ಗೂ answer ಮಾಡ್ತೇನಿ, please".

"ಜಳಕ ಮಾಡು ಅಂದೇ, ಮಾಡಿದೆ, ಪೂಜೆಗೆ ಜೊತಿಗೆ ಕುಂದರು ಅಂದೆ, ಕೂತುಕೊಂಡೆ, ಮುಂದ?"

" ಒಂದು ಬಾಳೆ ಹಣ್ಣು, ಹಸುರ್ ಸೇಬು, ಒಂದು ಹೋಳು ಅನಾನಸ್, ಬಟ್ಟಲು ದ್ರಾಕ್ಷಿ ಹಣ್ಣು, ಒಂದೆರಡು ಹೋಳು ಕಲ್ಲಂಗಡಿ ಹಣ್ಣು, ಇದೆಲ್ಲಾ ಒಂದು ಪರಾತದೊಳಗ ಹಾಕಿಟ್ಟೇನಿ, ತೊಗೊಂಬಾರೋ".

"ಅಪ್ಪಾ, ಇದಕ್ಕ ಯಾ ದೇಶದೊಳಾಗ ಉಪವಾಸ ಅಂತಾರ, ಎಷ್ಟರ calories intake ಆಗ್ತದ, ಒಂಚೂರು ಖಬರೈತಿ ನಿಮಗ"

"ಇದು ಫಲಾಹಾರ, ಶಿವರಾತ್ರಿ ಒಳಗ ಇದೆಲ್ಲಾ allowed, ಹೊಟ್ಟೆ ಚೂರು ಚೂರು ಅನ್ಲಿಕತ್ತದ. Please ತೊಗೊಂಬಾರೋ ".

"ನಿಮಗೆಲ್ಲ ನಿರ್ಜಲ ಏಕಾದಶಿನ ಚೊಲೋ, ಅವತ್ತು ಒಂದಿನ ಉಪವಾಸ ಕರೆಕ್ಟ್ ಆಗಿ ಮಾಡ್ತೀರಿ ನೋಡರಿ ನೀವು. ಯಾವ ಯಾವ ಹಬ್ಬದಾಗ ಎನ್ ಮಾಡಬಾರದು ಅದನ್ನ ಎಷ್ಟ ಮಾಡಿದರ ok ok ಅಂತ correct ಆಗಿ ಕೇಳ್ಕೊಂಬಂದು ನಿಮಗ ಎಷ್ಟು ಬೇಕು ಅಷ್ಟು ಮಾಡ್ತೀರಿ, ಅದನ್ನ ಉಪವಾಸ ಅಂತಾ ಬೇರೆ ಕರೀತೀರಿ, ಸ್ವಚ್ಛಾತು ಹೋಗಿರಿ".

ಅವಾ ಹೇಳಿದ್ದು ಖರೇ ಹೌದೋ ಅಲ್ವೋ, ಮನಸ್ಸಿಗೆ ಕಸಿವಿಸಿ ಆಗಿದ್ದಂತೂ ಖರೆ ಖರೆ.

ಪರಾಥ ತಂದೀಟ್ಟವನ ಮುಖದೊಳಗ ಇನ್ನೊಂದು ಪ್ರಶ್ನಾರ್ಥಕ ಚಿನ್ಹೆ ಇತ್ತು, 

"ಈಗಿನಾತು, ಮತ್ಯಾಕ ಮುಖಾ ಗಂಟಿಟ್ಕೊಂಡಿ ಗಿರಿ ".

"ಉಪವಾಸ ಏನೋ ಹಿಂಗ ಮಾಡ್ಲಿಕತ್ತಿರಿ, ಜಾಗರಣೆ ಎನ್ ಮಾಡ್ತೀರಿ", ಅವಾ ಕೇಳಿ ಹಗುರಾಗಿಬಿಟ್ಟ. ಸಂಜಿಕ ೭:೩೦ ಗೆ ಊಟಾ, ೯ ಘಂಟೆಗೆ ನಿದ್ದೆ ಮಾಡೋ ದೇಹಾ ಇವತ್ತು ಜಾಗರಣಿ ಹೆಂಗ ಮಾಡ್ತತಿ ಅಂದುಕೊಂಡಿರಬೇಕು ಅವಾ.

"ಪಕ್ಕದ ಮನಿ ಸತೀಶ್ ಸರ್ ಗೆ ಸಾಯಂಕಾಲ ಬರ್ಲಿಕ್ಕೆ ಹೇಳೇನಿ, ಒಂಚೂರು ಹರಟೆ ಹೊಡದು, ಹಾವು ಏಣಿ, ಚದುರಂಗ, ಏಳು ಮನಿ ಚಕ್ಕಾಟ ಆಡಿ, ಆಮೇಲೆ ಬೆಳವಡಿ ಮಲ್ಲಮ್ಮ, ಸಂಗ್ಯಾ ಬಾಳ್ಯಾ ಸಿನಿಮಾ ನೋಡೋ ಅಷ್ಟೊತ್ತಿಗೆ ಚುಮು ಚುಮು ನಸಿಕಾಗೀರ್ಥತಿ, ದೇವರಿಗೆ ಕೈ ಮುಗಿದು ಮಕ್ಕೊಳೋದು ".

"ಹೋ, ಜಾಗರಣಿ ಅಂದ್ರ ಇಷ್ಟ ಏನೂ? ನಾ ಏನು ಪೂಜೆ, ಭಜನೆ ಇರ್ತವು ಅನ್ಕೊಂಡಿದ್ದೆ ".

" ಹೂಂ, ಅದೂ ಮಾಡ್ಬೋದು, ನಾ ಇದು ಮಾಡಿ ರಾತ್ರಿ ಪೂರ್ತಿ ಎಚ್ಚರ ಇದ್ದು ಮಕ್ಕಂತೇನಿ".

" ಶುದ್ದಾತು, ಚೊಲೋ ಅದ ನಿಮ್ಮ ಶಿವರಾತ್ರಿ".