Friday, February 27, 2026

ಶ್ರೀ - ಅಪ್ಪಿ ಕಥಾ ಪ್ರಸಂಗ ೨

 ಶ್ರೀ ಹಾಗೂ ಅಪ್ಪಿ ಕಾಲೇಜು ದಿನಗಳಿಂದ ಗೆಳೆಯರು. ಇಬ್ಬರಿಗೂ ಒಂದೇ ಕಂಪನಿಯಲ್ಲಿ ಕೆಲಸ ಸಿಕ್ಕಿದ್ದು ಆಕಸ್ಮಿಕವೇ ಸರಿ. ಕೆಲಸ ಮುಗಿದ ಮೇಲೆ ಇಬ್ಬರೂ ಒಂದೇ ಗಾಡಿಯಲ್ಲಿ ಕೂತು ಮನೆಗೆ ಹೋಗುವ ರೂಢಿ, ಇಬ್ಬರೂ ನೆರೆಹೊರೆ ಕೂಡಾ ಹೌದು. 

ಮದುವೆಯಾಗಿ, ಮಕ್ಕಳಾಗಿ, ಮಕ್ಕಳು ಶಾಲೆಗೆ ಹೋಗುವುದಕ್ಕೆ ಪ್ರಾರಂಭಿಸಿದರೂ ಇವರ ದಿನಚರಿಯಲ್ಲಿ ಒಂಚೂರು ಬದಲಾವಣೆಯಾಗಿದ್ದು ನಾ ಕಾಣೆ. ಇಬ್ಬರ ಮನೆ ದೋಸೆ ತೂತಾದರೂ, ಎಲ್ಲಿ ಎಷ್ಟು ತೂತುಗಳಿವೆ ಎಂದು ಪರಸ್ಪರರಿಗೆ ಗೊತ್ತಾಗುವಷ್ಟು ಗಾಢ ಗೆಳೆತನ ಇವರದ್ದು. ಎಲ್ಲವೂ ಸರಿ ಆದರೆ ಶ್ರೀ ಪಕ್ಕಾ ನಾಸ್ತಿಕ, ಅಪ್ಪಿ ಹೇಳಿಕೊಳ್ಳುವಂಥ ಅಸ್ಥಿಕನಲ್ಲದಿದ್ದರೂ, ಸಂಕಟ ಬಂದಾಗ ವೆಂಕಟರಮಣ ಅನ್ನುವಷ್ಟಾದರೂ ಭಕ್ತಿ ಇದೆ. ಭಕ್ತಿಗಿಂತ ಭಯವೇ ಜಾಸ್ತಿ ಅನ್ನಿ.

ಎಂದಿನಂತೆ ಅಂದು ಸಂಜೆ ಕಂಪನಿಯ ಕೆಲಸ ಮುಗಿಸಿ ಅವರ ಮಾಮೂಲಿ ಚಹಾ ಅಂಗಡಿಯಲ್ಲಿ ಬಿಸಿ ಬಿಸಿ ಬಾದಾಮಿ ಹಾಲು, ಒಂದು ಉಸ್ಮಾನಿಯಾ ಬಿಸ್ಕೆಟ್ ಸವಿಯುತ್ತಿರುವಾಗ ಅಪ್ಪಿಯ ಮುಖ ಸಪ್ಪಗಿರುವುದನ್ನ ಕಂಡ ಶ್ರೀ "ಯಾಕಲೇ, ಏನಾತು." ಎಂದು ಕೇಳಿದ.

"ನಾಳೆ ಮಹಾಶಿವರಾತ್ರಿ".

"ಅದಕ್ಕ?".

"ಬೆಳಿಗ್ಗೆ ನೀಲಾ ಹೇಳ್ತಿದ್ಲು, ಬರೋಮುಂದ ಒಂದು ಕಲ್ಲಂಗಡಿ ಹಣ್ಣು, ಒಂದು ಕರಬೂಜ, ಒಂದು ಡಜನ್ ಬಾಳೆ ಹಣ್ಣು, ಕಬ್ಬು, ಕೋಬರಿ, ದ್ರಾಕ್ಷಿ ಹಣ್ಣು, ತೆಳ್ಳಗಿನ ಅವಲಕ್ಕಿ, ಉಪ್ಪಿಟ್ಟು ರವಾ ಎಲ್ಲಾ ತೊಗೊಂಬರ್ರಿ, ನಾಳೆ ಎಲ್ಲಾರೂ ಉಪವಾಸ ಮಾಡೋದದ  ಅಂತ".

"ಅಷ್ಟ ಹೌದಲ್ಲ, ನೀನ್ ಹೆಂಡ್ತಿ ಹೇಳ್ಯಾಳ ಅಂದ್ರ ತೊಗೊಂಡು ಹೋಗು, ಗಾಡಿನ ರಸವಂತೀ ಹಣ್ಣಿನ ಅಂಗಡಿ ಹತ್ರ ನಿಲ್ಲಸ್ತೇನಿ".

"ಅದು ಮಾಡಿದ್ರಾಯ್ತು, ನನ್ನ ಮಗ ಉಡಾಳ ಗಿರಿ, ಅಪ್ಪ ಉಪವಾಸ ಯಾಕ ಮಾಡಬೇಕು ಶಿವರಾತ್ರಿ ಗೆ ಅಂತ ಕೇಳಿದ".

"ಶಬ್ಭಾಷ್, I like this "ಯಾಕ" questioning mindset".

"ಈಗ ಆಫೀಸ್ ಗೆ ಲೇಟ್ ಆಗ್ಲಿಕತ್ತದ , ಬಂದು ಹೇಳ್ತೀನಿ" ಅಂದು ಹೆಂಗೋ ತಪ್ಪಿಸಿಕೊಂಡೆ.

"ಮುಂದ".

"ಮುಂದ ಅಂದ್ರ ಎನ್ಲೆ, ಈಗ ಹೋದ್ರ ಸಾವಿರ questions ಇರ್ತಾವು ಅವಂದು, ಅವಂಗೆ answers ಹೇಳಿದ ಮ್ಯಾಲೆ ಅವಾ ನನ್ನ ಬಿಡೋದು, ಜೀವಂತ".

"ಹೌದು, ಯಾಕ ಉಪವಾಸ ಅಂತ ಒಂದು concept ಅದ ನಮಗ?".

"ಯಾಕಂದ್ರ, ಶಿವರಾತ್ರಿಗೆ ಅಷ್ಟ ಅಲ್ಲ, ಸಂಕಷ್ಟಿ, ಏಕಾದಶಿ, ಚತುಷ್ಟಿ ಅಂತ ಬಾಳ ದಿನಾ ಉಪವಾಸ ಇರ್ತೇವಿ. ದಿನಾ ಗಂಟಲು ಪೂರ್ತಿ ಮೂರು ಹೊತ್ತು ತಿಂದು ನಮ್ಮ ಜೀರ್ಣಾಂಗ ವ್ಯವಸ್ಥೆ ಹದಗೆಟ್ಟಿರ್ಥತಿ, ಅದಕ್ಕ ಸ್ವಲ್ಪರ ಅವಾಗಾವಾಗ ವಿಶ್ರಾಂತಿ ಸಿಗಲಿ ಅಂತ ಮಾಡಿರ್ತಾರ ಹಿರಿಯರು ".

" ಹಂಗಾದ್ರ, ಆರೋಗ್ಯದ ದೃಷ್ಟಿಯಿಂದ ಉಪವಾಸ ಮಾಡ್ಯಾರ ಅಂತಿ?". 

"ಶಿವನಿಗೆ ಈ ಆಡಂಬರ, ವೈಭವ ಎಲ್ಲಾ ಹಿಡ್ಸಂಗಿಲ್ಲ. ಎಲ್ಲಾ ಬಿಟ್ಟು ಬೂದಿ ಬಳಕೊಂಡು ಸ್ಮಶಾನದೊಳಾಗ ಇರೋ ದೇವರಿಗೆ ಒಂದು ದಿನ ಉಪವಾಸ ಇರೋದು ತಪ್ಪಲ್ಲ ಅಲ್ವಾ? ಅಷ್ಟ ಅಲ್ಲಪಾ, ಶಿವರಾತ್ರಿಯ ರಾತ್ರಿ ಬ್ರಹ್ಮಾಂಡದಲ್ಲಿ ಶಕ್ತಿಯ ಪ್ರವಾಹ ಉಚ್ಛ ಮಟ್ಟಕ್ಕೆ ಏರಿರುತ್ತ, ನಾವು ದ್ಯಾನದಲ್ಲಿದ್ರೆ ನಮ್ಮೊಳಗಿನ ಆಧ್ಯಾತ್ಮಿಕ ಮನಸ್ಸಿಗೆ ಆ ಶಕ್ತಿಯ ಪ್ರಭಾವದ ಅನುಭವ ಆಗ್ತದ ಅಂತ ನಮ್ಮಜ್ಜ ಹೇಳಿದ ನೆನಪು ನಾವು ಸಣ್ಣೋರಿರೋಬೇಕಿದ್ರ".

"So, ಶಿವ ಎಲ್ಲಾ ತ್ಯಜಿಸಾನ ಅಂತ ನೀ ಊಟ ಮಾಡದಂಗ ಉಪವಾಸ ಮಾಡೋದು, ನಿದ್ದಿ ಮಾಡಲಾರದ ಜಾಗರಣಿ ಮಾಡೋದು?".

"ಅಷ್ಟ ಅಲ್ಲೇನು?".

" ಮುಸ್ತಫಾ ರೋಜಾ ಮಾಡೋದು, ದೇವಾಲೋಗನಾಥನ್ ಈಸ್ಟರ್ ಗೆ Lent period ಅಂತ ಮಾಡೋದು, ಅದು ಏನು ?".

"ಅದು ಅವರಿಗೆ ಗೊತ್ತಿರುತ್ತ, ನಂಗ ಕೇಳಿದ್ರ ನಾ ಎನ್ ಹೇಳ್ಲಿ?".

" ಯಾವ ದೇವ್ರು ಉಪವಾಸ ಮಾಡ್ರಿ, ಕುರಿ ಕೋಳಿನ ಕಡಿರಿ, ಬರೀ ಅವಲಕ್ಕಿ ಉಪ್ಪಿಟ್ಟು, ಸಾಭುದಾನ ವಡಿ ತಿಂದು ದಿನಾ ಎಲ್ಲಾ ಕಳಿರಿ  ಅಂತ ಹೇಳಿಲ್ಲಲ್ಲಾ?".

" ಹೋಗಿ ಹೋಗಿ ನೀನ್ ಹತ್ರ ದೇವ್ರು, ಹಬ್ಬ ಅಂತ ಹೇಳಿದ್ನಲ್ಲ, ನಂಗ ಬುದ್ದಿ ಇಲ್ಲಾ ಬಿಡು. ನೀ ಒಬ್ಬ ನಾಸ್ತಿಕ ಅಂತ ಮತ್ತ prove ಮಾಡಿದಿ ನೋಡು ಇವತ್ತು. ಹಂಗಾರ ಈ ದಿನ ಯಾಕ ಉಪವಾಸ ಮಾಡಬೇಕು ಅಂತೀರಿ ಶ್ರೀಮಾನ್ ಶ್ರೀ ಅವರೇ".

"ನಂಗೂ ಗೊತ್ತಿಲ್ಲಾ, ಆದ್ರ ಏನಿರ್ಬಹುದು ಅನ್ನೋ ಕುತೂಹಲ ಐತಿ, thanks to your son Giri."

"ನಮಗ ಊಟದ ಬೆಲೆ ಗೊತ್ತಾಗಲಿ ಅಂತ ಏನಾದ್ರೂ ನಮ್ಮ ಹಿರಿಯರು ಈ ಆಚರಣೆ ಜಾರಿಗೆ ಮಾಡಿದ್ರಾ ?".

"ನನಗನ್ನಿಸೋದು, ಹಸಿವಿನ ಅನುಭವ ಆಗಲಿ ಎಲ್ಲಾರಿಗೂ ಅಂತ ".

"ಹಸಿವಿನ ಅನುಭವ ಎಲ್ಲಾರಿಗೂ ಒಂದಲ್ಲಾ ಒಂದು ಹೊತ್ತಲ್ಲಿ ಆಗಿರ್ತದ, ಅಲ್ಲಾ?".

"ಒಂದು ದಿನ ಪೂರ್ತಿ ಉಪವಾಸ ಇದ್ದು, ಒಂದು ರಾತ್ರಿ ಇಡೀ ನಿದ್ದಿಗೆಟ್ರ ಏನೆಲ್ಲಾ ಆಗ್ತದ, ನಮ್ಮ ವಿಚಾರಗಳು ಎಷ್ಟು ಬದಲಾಗ್ತವ, ನಮ್ಮ ದಿನಚರಿ ಎಷ್ಟೆಲ್ಲ ಪರಿಣಾಮ ಆಗ್ತದ ಅಂತ ".

" ಹಂಗ ಮಾಡಿದ್ರ ನಮಗೇನು ಬಂತು ಲಾಭ ?".

"ಹಂಗ ಮಾಡಿದ್ರ ನಂಗ ಅನ್ನಿಸೋದು ನಮ್ಮ ಅನುಭವಕ್ಕ ಬರ್ತದ ಈ ಊಟದ ಮತ್ತು ನಿದ್ದಿಯ ಮಹತ್ವ. ಯಾರು ಊಟ ಇಲ್ದಂಗ ಇರ್ತಾರಲ್ಲ ಅವರಿಗೆ ನಾವು ಮನಸಾಪೂರ್ವಕ ಧಾನ ಮಾಡ್ತೇವಿ. ದಯೆಯಿಂದ ಧಾನ ಮಾಡ್ತೇವಿ".

"ಇದು ಯಾಕೋ ಅಸಮಂಜಸ ಅನ್ನಿಸ್ತದ, ಅಲ್ಲೋ ದೋಸ್ತ, ಧಾನ ಮಾಡ್ಲಿಕ್ಕೆ ಉಪವಾಸ ಇರಲಿಕ್ಕೆ ಬೇಕೇನು? ಉಪವಾಸ ಇಲ್ದಂಗ ಇನ್ನೊಬ್ಬನಿಗೆ ಊಟ ಹಾಕಿದ್ರ ಅದು ಅವನ ಹೊಟ್ಟಿ ತುಂಬಸಂಗಿಲ್ಲ?".

"ಧಾನ ಅನ್ನೋದು ಅವನಿಗೆ ಒಳ್ಳೆದಾಗಲಿ ಅಂತ ಮಾಡ್ತಾರೇನೋ ಹುಚ್ಚಪ್ಪ, ಅದು  ಧಾನಿಗೂ ಒಳ್ಳೆದು ಮಾಡೋದು. ಆ ಧಾನಿಗೆ, ನಾ ಧಾನ ಮಾಡಿದ್ನಲ್ಲ ಅನ್ನೋ ಅಹಂ ಅವನಿಗೆ ಬರದಂಗಿರಲಿ, ಅವನ ಮನಸ್ಸಿನೊಳಗ ದಯೆ ತುಂಬಿಕೊಂಡಿರಲಿ ಅಂತ ಹಿರಿಯರು ಇಂಥಾ ಒಂದು ಆಚರಣೆ ಮಾಡಿರಬಹುದು, ಅಷ್ಟಿಲ್ದ ಹೇಳ್ಯಾರೇನು ಬಸವಣ್ಣೋರು, ದಯೆಯೇ ಧರ್ಮದ ಮೂಲವಯ್ಯ, ದಯೆ ಬೇಕು ಸಕಲ ... ".

" ಹೇ, ಹೇ ಹೇ, ದೋಸ್ತ ನಿಲ್ಲಿಸು. ಸೂರ್ಯ ಆಗಲೇ ಮುಳುಗ್ಲಿಕತ್ತಾ, ನನ್ನ ಹೆಂಡ್ತಿ ಹೇಳಿದ್ದೆಲ್ಲ ತೊಗೊಂಡು ಹೋಗಬೇಕು, ಇಲ್ಲಾಂದ್ರ ನನ್ನ ಚಂಡ ತಗಿತ್ತಾಳಕಿ . ನನ್ನ ಮಗನಿಗೆ ನಾ ಬೇಟೆಗಾರ ಬಿಲ್ವ ಮರ ಹತ್ತಿ ಆ ದಿನ ಉಪವಾಸ ಇದ್ದು, ರಾತ್ರಿ ಪೂರ್ತಿ ಜಾಗರಣಿ ಮಾಡಿ, ಬಿಲ್ವ ಎಲೆಗಳನ್ನ ಒಂದೊಂದ ಕಿತ್ಕೊಂತ ಕೆಳಗ ಹಾಕಿದ್ದು, ಅವೆಲ್ಲ ಮರದ ಕೆಳಗಿದ್ದ ಶಿವಲಿಂಗದ ಮೇಲೆ ಬಿದ್ದು ಶಿವ ಪ್ರಸನ್ನ ಆಗಿ ಆ ಬೇಟೆಗಾರ ಮೋಕ್ಷ ಪಡೆದ ಕಥೆ ಹೇಳ್ತೀನಿ ನಡಿಪಾ. ನೀ ಹೇಳಿದ್ದೆಲ್ಲ ಕೇಳಿ ನನ್ ತಲಿ ಮೊಸರು ಗಡಿಗಿ ಆಗೇತಿ ".

############ ಶುಭಂ #############.

ಇಂತಿ,

ಶ್ರೀಅಪ್ಪಿ.


ಕಥೆಯ ಹಿನ್ನಲೆ: 

https://naanoo-mama.blogspot.com/2026/02/blog-post.html

https://naanoo-mama.blogspot.com/2025/10/blog-post.html




No comments: